ಹಣ ಮರುಪಾವತಿಸುವಂತೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಸಹಾರಾ ಸಮೂಹದ ಹೂಡಿಕೆದಾರರು ಸಜ್ಜು
ಸಾಂದರ್ಭಿಕ ಚಿತ್ರ.| Photo: PTI
ಹೊಸದಿಲ್ಲಿ: ಹಲವಾರು ವರ್ಷಗಳಿಂದ ತಾವು ಸಹಾರಾ ಸಂಸ್ಥೆಯಲ್ಲಿ ಹೂಡಿಕೆ ಮಾಡಿರುವ ಹಣವನ್ನು ಮರುಪಾವತಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಸುಮಾರು 5 ಲಕ್ಷ ಸಹಾರಾ ಸಂಸ್ಥೆಯ ಹೂಡಿಕೆದಾರರು ರಾಷ್ಟ್ರ ರಾಜಧಾನಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ ಎಂದು thewire.in ವರದಿ ಮಾಡಿದೆ.
ನ.14ರಂದು ಸಹಾರಾ ಸಮೂಹದ ಸಂಸ್ಥಾಪಕ ಸುಬ್ರತಾ ರಾಯ್ ನಿಧನರಾಗುವುದರೊಂದಿಗೆ, ದೇಶಾದ್ಯಂತ 27 ರಾಜ್ಯಗಳಲ್ಲಿರುವ ಹೂಡಿಕೆದಾರರಲ್ಲಿ ಅಭದ್ರತೆ ಹಾಗೂ ತುರ್ತಿನ ಪ್ರವೃತ್ತಿ ಕಂಡು ಬಂದಿದೆ. ಜುಲೈ ತಿಂಗಳಲ್ಲಿ ಸಹಾರಾ ಸಮೂಹದ ಹೂಡಿಕೆದಾರರಿಗೆ ಮರುಪಾವತಿ ಸೌಲಭ್ಯವನ್ನು ಒದಗಿಸಲು ಕೇಂದ್ರ ಸರ್ಕಾರವು ಪೋರ್ಟಲ್ ಅನ್ನು ಪ್ರಾರಂಭಿಸಿತ್ತು. ಆದರೆ, ಪ್ರಾಧಿಕಾರಗಳ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳನ್ನು ಕ್ಷುಲ್ಲಕ ನೆಲೆಯವು ಎಂದು ತಳ್ಳಿ ಹಾಕಲಾಗಿದೆ. ಈ ನಡುವೆ, ವಾರಸುದಾರರಿಲ್ಲದ ನಿಧಿ ಎಂದು ಕನ್ಸಾಲಿಡೇಟೆಡ್ ಫಂಡ್ ಆಫ್ ಇಂಡಿಯಾಗೆ ತಮ್ಮ ಹಣವನ್ನು ವರ್ಗಾಯಿಸಬಹುದು ಎಂಬ ಆತಂಕ ಲಕ್ಷಾಂತರ ಹೂಡಿಕೆದಾರರಲ್ಲಿ ಮನೆ ಮಾಡಿದೆ.
“ಒಂದು ವೇಳೆ ಸಹಾರಾದ ಮುಖ್ಯಸ್ಥರ ಸ್ವತ್ತನ್ನು ಸರ್ಕಾರವು ಮುಟ್ಟುಗೋಲು ಹಾಕಿಕೊಂಡರೆ, ಕೋಟ್ಯಂತರ ಜನರ ಹೂಡಿಕೆ ನಷ್ಟವಾಗಲಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ” ಎಂದು ಸಹಾರಾ ಹೂಡಿಕೆದಾರರನ್ನು ಪ್ರತಿನಿಧಿಸುವ ನೋಂದಾಯಿತ ಸಂಸ್ಥೆಯೊಂದರ ಅಧ್ಯಕ್ಷ ಅಭಯ್ ದೇವ್ ಶುಕ್ಲಾ ಎಚ್ಚರಿಕೆ ನೀಡಿದ್ದಾರೆ.