ದಿಲ್ಲಿಯ ‘ಅಗೋಚರ ಶಕ್ತಿ’ಯೊಂದು ಪವಾರ್ ಕುಟುಂಬದಲ್ಲಿ ಒಡಕು ಮೂಡಿಸುತ್ತಿದೆ: ಸಂಸದೆ ಸುಪ್ರಿಯಾ ಸುಲೆ
ಸುಪ್ರಿಯಾ ಸುಲೆ (PTI)
ಹೊಸದಿಲ್ಲಿ: ‘ದಿಲ್ಲಿಯಿಂದ ಅಗೋಚರ ಶಕ್ತಿಯೊಂದು’ ತನ್ನ ಕುಟುಂಬದಲ್ಲಿ ಮತ್ತು ಮಹಾರಾಷ್ಟ್ರ ರಾಜಕೀಯದಲ್ಲಿ ಒಡಕು ಮೂಡಿಸಲು ಪ್ರಯತ್ನಿಸುತ್ತಿದೆ ಎಂದು ಎನ್ಸಿಪಿ ವರಿಷ್ಠ ಶರದ ಪವಾರ್ ಪುತ್ರಿ ಹಾಗೂ ಸಂಸದೆ ಸುಪ್ರಿಯಾ ಸುಲೆ ರವಿವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸುಲೆ, ತನ್ನ ಅತ್ತಿಗೆ ಸುನೇತ್ರಾ ಪವಾರ್ (ಉಪಮುಖ್ಯಮಂತ್ರಿ ಅಜಿತ್ ಪವಾರ್ ಪತ್ನಿ) ಅಥವಾ ಆವರ ಪುತ್ರ ಪಾರ್ಥ ಪವಾರ್ ೨೦೨೪ರ ಸಾರ್ವತ್ರಿಕ ಚುನಾವಣೆಗಳಲ್ಲಿ ಬಾರಾಮತಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂಬ ಊಹಾಪೋಹಗಳ ನಡುವೆಯೇ ಈ ಹೇಳಿಕೆಯನ್ನು ನೀಡಿದರು.
ಸುಲೆ ಎನ್ಸಿಪಿಯ ಭದ್ರಕೋಟೆಯಾಗಿರುವ ಬಾರಾಮತಿಯ ಹಾಲಿ ಸಂಸದೆಯಾಗಿದ್ದಾರೆ.
ಅಜಿತ್ ಪವಾರ್ ಅವರು ಕಳೆದ ಜುಲೈನಲ್ಲಿ ಹಲವಾರು ಬಂಡುಕೋರ ಎನ್ಸಿಪಿ ಶಾಸಕರೊಂದಿಗೆ ಏಕನಾಥ್ ಶಿಂಧೆಯವರ ಮಹಾರಾಷ್ಟ್ರ ಸರಕಾರಕ್ಕೆ ಸೇರ್ಪಡೆಗೊಂಡಾಗಿನಿಂದ ಪವಾರ್ ಕುಟುಂಬದಲ್ಲಿಯ ಅತೃಪ್ತಿಯು ಸುದ್ದಿಯಲ್ಲಿದೆ.
ತಾನು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತೇನೆ ಎಂಬ ವರದಿಯನ್ನು ಶರದ ಪವಾರ್ ನಿರಾಕರಿಸಿದ್ದಾರಾದರೂ ಅಂತಹ ಊಹಾಪೋಹಗಳು ಇರುವುದಂತೂ ನಿಜ.
ಬಾರಾಮತಿಯಲ್ಲಿ ತನ್ನ ವಿರುದ್ಧ ಯಾರು ಕಣಕ್ಕೆ ಇಳಿಯಲಿದ್ದಾರೆ ಎನ್ನುವುದು ತನಗೆ ಗೊತ್ತಿಲ್ಲ ಎಂದು ರವಿವಾರ ಸುದ್ದಿಗಾರರಿಗೆ ತಳಿಸಿದ ಸುಲೆ, ‘ನಾನು ಮೂರು ಸಲ ಬಾರಾಮತಿಯಿಂದ ಗೆದ್ದಿದ್ದೇನೆ ಮತ್ತು ನಾಲ್ಕನೆಯ ಸಲ ನನ್ನ ವಿರುದ್ಧ ಯಾರೇ ಸ್ಪರ್ಧಿಸಿದರೂ ಅವರನ್ನು ಸ್ವಾಗತಿಸುತ್ತೇನೆ ’ ಎಂದು ಹೇಳಿದರು.
ಪರೀಕ್ಷೆಯಲ್ಲಿ ನಕಲು ಮಾಡುವ ಬದಲು ಸ್ವಂತ ಪ್ರತಿಭೆಯಿಂದ ತೇರ್ಗಡೆ ಯಾಗುವುದು ಒಳ್ಳೆಯದು ಎಂದ ಅವರು, ಇಂತಹ ಊಹಾಪೋಹಗಳನ್ನು ಯಾರು ಹುಟ್ಟುಹಾಕುತ್ತಿದ್ದಾರೆ ಎನ್ನುವುದು ನಿಮಗೆಲ್ಲರಿಗೂ ತಿಳಿದಿದೆ ಎಂದರು.