ರಾಮ ಭಕ್ತರಿಗೆ ಮಾತ್ರ ಮಂದಿರ ಉದ್ಘಾಟನೆಗೆ ಆಹ್ವಾನ ; ಉದ್ಧವ್ ಠಾಕ್ರೆ ಹೇಳಿಕೆಗೆ ಪ್ರಧಾನ ಪುರೋಹಿತ ಪ್ರತಿಕ್ರಿಯೆ
ಸತ್ಯೇಂದ್ರ ದಾಸ್ | Photo: ANI
ಹೊಸದಿಲ್ಲಿ: ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ರಾಮ ಮಂದಿರ ಉದ್ಘಾಟನೆಯ ಆಮಂತ್ರಣ ಪತ್ರಿಕೆ ತನಗೆ ಬಂದಿಲ್ಲ ಎಂಬುದಾಗಿ ಶಿವಸೇನೆ (ಉದ್ಧವ್ ಭಾಳಾ ಠಾಕ್ರೆ ಬಣ) ಅಧ್ಯಕ್ಷ ಉದ್ಧವ್ ಠಾಕ್ರೆ ನೀಡಿರುವ ಹೇಳಿಕೆಗೆ ಮಂದಿರದ ಪ್ರಧಾನ ಪುರೋಹಿತ ಆಚಾರ್ಯ ಸತ್ಯೇಂದ್ರ ದಾಸ್ ರವಿವಾರ ಕಿಡಿಕಾರಿದ್ದಾರೆ. ‘‘ರಾಮ ಭಕ್ತರನ್ನು’’ ಮಾತ್ರ ದೇವಸ್ಥಾನದ ಉದ್ಘಾಟನೆಗೆ ಆಹ್ವಾನಿಸಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಶ್ರೀ ರಾಮ ಜನ್ಮಭೂಮಿ ಮಂದಿರದ ಉದ್ಘಾಟನೆ ಜನವರಿ 22ರಂದು ನಡೆಯಲಿದೆ. ‘‘ರಾಮ ಭಕ್ತರಿಗೆ ಮಾತ್ರ ಆಹ್ವಾನಪತ್ರಿಕೆಗಳನ್ನು ಕಳುಹಿಸಲಾಗಿದೆ. ರಾಮನ ಹೆಸರಿನಲ್ಲಿ ಬಿಜೆಪಿ ಚುನಾವಣೆ ಎದುರಿಸುತ್ತಿದೆ ಎಂದು ಹೇಳುವುದು ಸಂಪೂರ್ಣ ತಪ್ಪಾಗಿದೆ. ನಮ್ಮ ಪ್ರಧಾನಿಗೆ ಎಲ್ಲೆಡೆ ಗೌರವವಿದೆ. ತನ್ನ ಅಧಿಕಾರಾವಧಿಯಲ್ಲಿ ಅವರು ಅಗಾಧ ಕೆಲಸಗಳನ್ನು ಮಾಡಿದ್ದಾರೆ. ಇದು ರಾಜಕೀಯವಲ್ಲ. ಇದು ಅವರ ಭಕ್ತಿ’’ ಎಂದು ಎಎನ್ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ರಾಮ ಮಂದಿರದ ಮುಖ್ಯ ಪುರೋಹಿತ ಹೇಳಿದ್ದಾರೆ.
ರಾಮ ಮಂದಿರ ಉದ್ಘಾಟನೆಗೆ ತನಗೆ ಆಹ್ವಾನ ನೀಡದಿರುವುದಕ್ಕೆ ಉದ್ಧವ್ ಠಾಕ್ರೆ ಬಿಜೆಪಿಯನ್ನು ಟೀಕಿಸಿದ್ದರು. ರಾಮಮಂದಿರ ವಿಗ್ರಹ ಪ್ರತಿಷ್ಠಾಪನೆಯಲ್ಲಿ ರಾಜಕೀಯ ಮಾಡಬಾರದು ಎಂದು ಅವರು ಹೇಳಿದ್ದರು. ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮವನ್ನು ರಾಜಕೀಯ ಕಾರ್ಯಕ್ರಮವನ್ನಾಗಿ ಅಥವಾ ಒಂದು ಪಕ್ಷದ ಕಾರ್ಯಕ್ರಮವಾಗಿ ಮಾಡಬಾರದು ಎಂದು ಅವರು ನುಡಿದಿದ್ದರು.
ಅದೇ ವೇಳೆ, ರಾಮ ಮಂದಿರ ಉದ್ಘಾಟನೆಯ ಬಗ್ಗೆ ತಾನು ರೋಮಾಂಚಿತನಾಗಿದ್ದೇನೆ ಎಂದು ಅವರು ಹೇಳಿದ್ದರು ಹಾಗೂ ಮಂದಿರ ನಿರ್ಮಾಣಕ್ಕಾಗಿ ತನ್ನ ತಂದೆ ಬಾಳಾ ಠಾಕ್ರೆ ಮಾಡಿದ್ದ ಹೋರಾಟವನ್ನು ಸ್ಮರಿಸಿಕೊಂಡಿದ್ದರು.