2024ರ ಐಪಿಎಲ್ ವೀಕ್ಷಕರ ಸಂಖ್ಯೆ 40 ಕೋಟಿ: ಡಿಸ್ನಿ ಸ್ಟಾರ್
ಹೊಸದಿಲ್ಲಿ: ಟೆಲಿವಿಷನ್ ನಲ್ಲಿ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್)-2024 ವೀಕ್ಷಿಸಿದವರ ಸಂಖ್ಯೆ 40 ಕೋಟಿಯನ್ನು ದಾಟಿದ್ದು, 18 ಪಂದ್ಯಗಳ ಒಟ್ಟು ವೀಕ್ಷಣೆಯಲ್ಲಿ ಇದು ಗರಿಷ್ಠ ಸಂಖ್ಯೆಯಾಗಿದೆ. ಅಧಿಕೃತ ಪ್ರಸಾರ ಸಂಸ್ಥೆಯಾದ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ನಲ್ಲಿ ಪಂದ್ಯದ ನೇರ ಪ್ರಸಾರವಿದ್ದು, ಕ್ರೀಡಾಭಿಮಾನಿಗಳು ಒಟ್ಟು 12,380 ಕೋಟಿ ನಿಮಿಷಗಳಷ್ಟು ವೀಕ್ಷಿಸಿದ್ದಾರೆ. ಇದು 2023ರ ಆವೃತ್ತಿಗೆ ಹೋಲಿಸಿದರೆ ಶೇಕಡ 15ರಷ್ಟು ಅಧಿಕ ಎಂದು ಪ್ರಸಾರ ವೀಕ್ಷಕ ಸಂಶೋಧನಾ ಸಂಸ್ಥೆಯ ಅಂಕಿ ಅಂಶಗಳನ್ನು ಉಲ್ಲೇಖಿಸಿ ಡಿಸ್ನಿ ಸ್ಟಾರ್ ಪ್ರಕಟಿಸಿದೆ.
ಹಿಂದಿನ ಆವೃತ್ತಿಯ ಐಪಿಎಲ್ ನಲ್ಲಿ ಮೊದಲ 18 ಪಂದ್ಯಗಳನ್ನು 36.4 ಕೋಟಿ ಮಂದಿ ವೀಕ್ಷಿಸಿದ್ದರು. ಅದೇ ರೀತಿ ಐಪಿಎಲ್ ನ ಟಿವಿಆರ್ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 17ರಷ್ಟು ಪ್ರಗತಿ ದಾಖಲಿಸಿದೆ. ವೀಕ್ಷಕರ ಸಂಖ್ಯೆ ಹೆಚ್ಚಿರುವುದು ಟಿವಿಯಲ್ಲಿ ಐಪಿಎಲ್ ಬಗೆಗೆ ಜನ ಹೊಂದಿರುವ ಪ್ರೀತಿ ಮತ್ತು ಬೆಂಬಲವನ್ನು ಸೂಚಿಸುತ್ತದೆ ಎಂದು ಸಂಸ್ಥೆ ಹೇಳಿದೆ.
ಪ್ರಸಕ್ತ ಸಾಲಿನಲ್ಲಿ ಭಾರತದ ಸಂಜ್ಞಾ ಭಾಷೆಯ ಫೀಡ್ ಮತ್ತು ಎಐ ಟೆಕ್ ಸೌಲಭ್ಯವನ್ನು ಆರಂಭಿಸಿರುವುದಕ್ಕೆ ಧನಾತ್ಮಕ ಪ್ರತಿಕ್ರಿಯೆ ಬಂದಿದ್ದು, ಮತ್ತಷ್ಟು ಹೆಚ್ಚಿನ ವೀಕ್ಷಕರನ್ನು ತಲುಪಲು ಮತ್ತು ಹೆಚ್ಚಿನ ಪಾಲ್ಗೊಳ್ಳುವಿಕೆಯ ವೀಕ್ಷಣಾ ಅನುಭವವನ್ನು ಸೃಷ್ಟಿಸಲು ಇದು ನೆರವಾಗಿದೆ.
ಈ ಮಧ್ಯೆ ಟಾಟಾ ಐಪಿಎಲ್ ನ ಅಧಿಕೃತ ಸ್ಟ್ರೀಮಿಂಗ್ ಪ್ಲಾಟ್ ಫಾರಂ ಆಗಿರುವ ಜಿಯೊ ಸಿನಿಮಾ ಹೇಳಿಕೆ ನೀಡಿ, ಮೊದಲ ಪಂದ್ಯಕ್ಕೆ 11.3 ಕೋಟಿ ವೀಕ್ಷಕರು ಪ್ಲಾಟ್ ಫಾರಂನಲ್ಲಿ ಲಾಗ್ ಇನ್ ಅಗಿದ್ದರು ಎಂದು ಪ್ರಕಟಿಸಿದೆ. ಇದು ಹಿಂದಿನ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡ 51ರಷ್ಟು ಅಧಿಕ.