ಐಪಿಎಲ್ನಲ್ಲಿ ತಂಬಾಕು,ಮದ್ಯ ಜಾಹೀರಾತು ನಿಷೇಧಿಸುವಂತೆ ಸರಕಾರದ ಸೂಚನೆ

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಐಪಿಎಲ್ ಪಂದ್ಯಗಳು ನಡೆಯುವಾಗ ಕ್ರೀಡಾಂಗಣದ ಆವರಣಗಳಲ್ಲಿ ಮತ್ತು ರಾಷ್ಟ್ರೀಯ ದೂರದರ್ಶನದಲ್ಲಿ ಪ್ರಸಾರದ ಅವಧಿಗಳಲ್ಲಿ ಪರೋಕ್ಷ ಪ್ರಚಾರಗಳು ಸೇರಿದಂತೆ ಎಲ್ಲ ರೂಪಗಳ ತಂಬಾಕು ಮತ್ತು ಮದ್ಯದ ಜಾಹೀರಾತುಗಳನ್ನು ನಿಷೇಧಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ಆಯೋಜಕರಿಗೆ ಸೂಚಿಸಿದೆ.
ಮಾರ್ಚ್ 22ರಿಂದ ಐಪಿಎಲ್ ಪಂದ್ಯಾವಳಿ ಆರಂಭಗೊಳ್ಳಲಿದೆ.
ಆರೋಗ್ಯ ಸೇವೆಗಳ ಮಹಾ ನಿರ್ದೇಶಕ ಅತುಲ್ ಗೋಯೆಲ್ ಅವರು ಐಪಿಎಲ್ ಅಧ್ಯಕ್ಷ ಅರುಣ್ ಸಿಂಗ್ ಧೂಮಲ್ ಅವರಿಗೆ ಬರೆದಿರುವ ಪತ್ರದಲ್ಲಿ, ‘ದೇಶದ ಯುವಕರಿಗೆ ಮಾದರಿಯಾಗಿರುವ ಕ್ರಿಕೆಟ್ ಆಟಗಾರರು ಯಾವುದೇ ರೀತಿಯ ತಂಬಾಕು ಅಥವಾ ಮದ್ಯದ ಜಾಹೀರಾತುಗಳೊಂದಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಸಂಪರ್ಕ ಹೊಂದಿರಬಾರದು. ಐಪಿಎಲ್ ಪಂದ್ಯಗಳು ಮತ್ತು ಸಂಬಂಧಿತ ಕಾರ್ಯಕ್ರಮಗಳು ನಡೆಯುವ ಕ್ರೀಡಾಂಗಣ ಆವರಣಗಳಲ್ಲಿ ಹಾಗೂ ರಾಷ್ಟ್ರೀಯ ದೂರದರ್ಶನದಲ್ಲಿ ಪ್ರಸಾರಗೊಳ್ಳುವ ಅವಧಿಗಳಲ್ಲಿ ಪರೋಕ್ಷ ಪ್ರಚಾರಗಳು ಸೇರಿದಂತೆ ಎಲ್ಲ ರೀತಿಯ ತಂಬಾಕು ಮತ್ತು ಮದ್ಯದ ಜಾಹೀರಾತುಗಳನ್ನು ನಿಷೇಧಿಸುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು’ ಎಂದು ತಿಳಿಸಿದ್ದಾರೆ.
ಐಪಿಎಲ್ ಪಂದ್ಯಗಳು ನಡೆಯುವಾಗ ಬಹುತೇಕ ಭಾರತೀಯರು ತಮ್ಮ ಟಿವಿ ಸೆಟ್ಗಳ ಮುಂದೆಯೇ ಇರುತ್ತಾರೆ. ಹೀಗಾಗಿ ಕಂಪನಿಗಳಿಗೆ ತಮ್ಮ ಉತ್ಪನ್ನಗಳ ಜಾಹೀರಾತುಗಳಿಗಾಗಿ ಐಪಿಎಲ್ ಮೆಚ್ಚಿನ ತಾಣವಾಗಿದೆ.
ಭಾರತವು ಸಾಂಕ್ರಾಮಿಕವಲ್ಲದ ಕಾಯಿಲೆಗಳು(ಎನ್ಸಿಡಿ), ಹೃದಯ ಸಂಬಂಧಿ ರೋಗಗಳು, ಕ್ಯಾನ್ಸರ್, ದೀರ್ಘಕಾಲದ ಶ್ವಾಸಕೋಶ ಕಾಯಿಲೆ, ಮಧುಮೇಹ, ಅಧಿಕ ರಕ್ತದೊತ್ತಡ ಇತ್ಯಾದಿಗಳ ಗಮನಾರ್ಹ ಹೊರೆಯನ್ನು ಅನುಭವಿಸುತ್ತಿದ್ದು,ಇವು ವಾರ್ಷಿಕವಾಗಿ ಶೇ.70ಕ್ಕೂ ಅಧಿಕ ಸಾವುಗಳಿಗೆ ಕಾರಣವಾಗಿವೆ. ತಂಬಾಕು ಮತ್ತು ಮದ್ಯಪಾನ ಎನ್ಸಿಡಿಗಳಿಗೆ ಪ್ರಮುಖ ಕಾರಣಗಳಾಗಿವೆ. ತಂಬಾಕು ಸಂಬಂಧಿತ ಸಾವುಗಳಲ್ಲಿ ನಾವು ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದ್ದು, ವಾರ್ಷಿಕವಾಗಿ ಸುಮಾರು 14 ಲಕ್ಷ ಜನರು ಬಲಿಯಾಗುತ್ತಿದ್ದರೆ ಮದ್ಯವು ಭಾರತೀಯರು ಅತ್ಯಂತ ಸಾಮಾನ್ಯವಾಗಿ ಬಳಸುವ ಭ್ರಾಮಕ ಪಾನೀಯವಾಗಿದೆ ಎಂದು ಗೋಯೆಲ್ ಪತ್ರದಲ್ಲಿ ಹೇಳಿದ್ದಾರೆ.
ಕ್ರಿಕೆಟಿಗರು ಸಾರ್ವಜನಿಕ ಆರೋಗ್ಯವನ್ನು ಉತ್ತೇಜಿಸುವ ನೈತಿಕ ಬದ್ಧತೆಯನ್ನು ಹೊಂದಿದ್ದಾರೆ ಎಂದು ಪತ್ರದಲ್ಲಿ ತಿಳಿಸಿರುವ ಗೋಯೆಲ್, ಆರೋಗ್ಯಕರ ಮತ್ತು ಸಕ್ರಿಯ ಜೀವನಶೈಲಿಯನ್ನು ಉತ್ತೇಜಿಸುವಲ್ಲಿ ಕ್ರಿಕೆಟಿಗರು ರೋಲ್ ಮಾಡೆಲ್ಗಳಾಗಿದ್ದಾರೆ. ದೇಶದ ಅತಿದೊಡ್ಡ ಕ್ರೀಡಾ ವೇದಿಕೆಯಾಗಿರುವ ಐಪಿಎಲ್ ಸಾರ್ವಜನಿಕ ಆರೋಗ್ಯವನ್ನು ಉತ್ತೇಜಿಸುವ ಮತ್ತು ಸರಕಾರದ ಆರೋಗ್ಯ ಉಪಕ್ರಮಗಳನ್ನು ಬೆಂಬಲಿಸುವ ಸಾಮಾಜಿಕ ಮತ್ತು ನೈತಿಕ ಹೊಣೆಗಾರಿಕೆಯನ್ನು ಹೊಂದಿದೆ ಎಂದು ಹೇಳಿದ್ದಾರೆ.