ಇಸ್ರೇಲ್ ಮೇಲೆ ಪ್ರಬಲ ದಾಳಿಗೆ ಇರಾನ್ ಸಜ್ಜು: ವರದಿ
ಆಯತುಲ್ಲಾ ಅಲಿ ಖಾಮಿನೈ | PC : PTI
ತೆಹ್ರಾನ್: ಇರಾನ್ ಹೆಚ್ಚು ಶಕ್ತಿಶಾಲಿ ಯುದ್ಧೋಪಕರಣಗಳು ಮತ್ತು ಶಸ್ತ್ರಾಸ್ತ್ರಗಳ ಮೂಲಕ ಇಸ್ರೇಲ್ ಮೇಲೆ ಪ್ರತಿದಾಳಿ ನಡೆಸಲು ಯೋಜಿಸುತ್ತಿದೆ ಎಂದು ಇರಾನ್ ಮತ್ತು ಅರಬ್ ಅಧಿಕಾರಿಗಳ ಹೇಳಿಕೆಗಳನ್ನು ಉಲ್ಲೇಖಿಸಿ ವಾಲ್ ಸ್ಟ್ರೀಟ್ ಜರ್ನಲ್ (Wall Street Journal) ವರದಿ ಮಾಡಿದೆ.
ಇರಾನ್ ನ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಇಸ್ರೇಲ್ ನಡೆಸಿದ ಅಕ್ಟೋಬರ್ 26ರ ದಾಳಿಗೆ ಕಠಿಣ ಪ್ರತೀಕಾರದ ಪ್ರತಿಜ್ಞೆ ಮಾಡಿದ ಬೆನ್ನಲ್ಲೇ ಈ ವರದಿ ಬಹಿರಂಗವಾಗಿದೆ.
ಇರಾನ್ ತನ್ನ ಪ್ರತಿಕ್ರಿಯೆಯನ್ನು ಕ್ಷಿಪಣಿಗಳು ಮತ್ತು ಡ್ರೋನ್ ಗಳಿಗೆ ಮಿತಿಗೊಳಿಸಲು ಯೋಜಿಸುತ್ತಿಲ್ಲ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಇಸ್ರೇಲ್ ವಿರುದ್ಧ ಪ್ರತಿದಾಳಿ ನಡೆಸುವುದಾಗಿ ರವಿವಾರ ಹೇಳಿದೆ. ಶನಿವಾರ ಇರಾನ್ ನ ಸರ್ವೋಚ್ಚ ನಾಯಕ ಅಯತುಲ್ಲಾ ಅಲಿ ಖಾಮಿನೈ ಟೆಹ್ರಾನ್ ಮತ್ತು ಪ್ರಾದೇಶಿಕ ಮಿತ್ರರಾಷ್ಟ್ರಗಳು ಇಸ್ರೇಲ್ ಮತ್ತು ಅಮೆರಿಕಾಗೆ ತಕ್ಕ ಪ್ರತಿಕ್ರಿಯೆ ನೀಡಲಿವೆ ಎಂದು ಹೇಳಿದ್ದಾರೆ.
ಅಕ್ಟೋಬರ್ 26ರಂದು ಇಸ್ರೇಲ್, ಇರಾನ್ ನಾದ್ಯಂತ ಮಿಲಿಟರಿ ಕೇಂದ್ರಗಳನ್ನು ಗುರಿಯಾಗಿಸಿ 100ಕ್ಕೂ ಹೆಚ್ಚು ಫೈಟರ್ ಜೆಟ್ಗಳ ಮೂಲಕ ದಾಳಿ ನಡೆಸಿತ್ತು. ದಾಳಿಯಲ್ಲಿ ಐವರು ನಾಗರಿಕರು ಮೃತಪಟ್ಟಿದ್ದರು.