ಅಟ್ಟಾರಿ ಗಡಿ ಬಂದ್: ಗಡಿ ಬಳಿ ಸಿಲುಕಿಕೊಂಡ ವ್ಯಾನ್ ನಲ್ಲಿ ಪ್ರಯಾಣಿಸುತ್ತಿದ್ದ ಇರಾನ್ ಮಹಿಳೆ
ನೆರವಿಗಾಗಿ ಪ್ರಧಾನಿ ಮೋದಿಗೆ ಮೊರೆ

PC : indiatoday.in
ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಭಾರತ-ಪಾಕಿಸ್ತಾನದ ಗಡಿಯನ್ನು ಮುಚ್ಚಿರುವುದರಿಂದ, ವ್ಯಾನ್ ನಲ್ಲಿ ಪ್ರಯಾಣಿಸುತ್ತಿದ್ದ ಇರಾನ್ ಮಹಿಳೆಯೊಬ್ಬರು ಅಟ್ಟಾರಿ ಬಳಿ ಸಿಲುಕಿಕೊಂಡು, ಸ್ವದೇಶಕ್ಕೆ ಮರಳಲು ಅಸಾಧ್ಯಾವಾಗಿರುವ ಘಟನೆ ವರದಿಯಾಗಿದೆ.
ಇನ್ನು ಕೆಲವೇ ದಿನಗಳಲ್ಲಿ ತನ್ನ ವೀಸಾ ಅವಧಿಯು ಮುಗಿಯಲಿರುವುದರಿಂದ, ತನಗೆ ನೆರವು ಒದಗಿಸಬೇಕು ಎಂದು ಭಾರತಕ್ಕೆ ಎರಡನೆ ಬಾರಿ ಭೇಟಿ ನೀಡಿರುವ ಎಲ್ಹಮ್ ಎಂಬ ಇರಾನ್ ಮಹಿಳೆಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮನವಿ ಮಾಡಿದ್ದಾರೆ.
ಈ ಕುರಿತು India Today ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಎಲ್ಹಮ್, “ಫೆಬ್ರವರಿ ತಿಂಗಳಲ್ಲಿ ನಾನು ಪ್ರವಾಸಿಯಾಗಿ ನನ್ನ ವ್ಯಾನ್ ನಲ್ಲಿ ಪಾಕಿಸ್ತಾನದ ಮೂಲಕ ಭಾರತಕ್ಕೆ ಬಂದಿದ್ದೆ. ನಾನೀಗ ಇರಾನ್ ಗೆ ಮರಳಬೇಕಿದ್ದು, ಗಡಿಗಳನ್ನು ಮುಚ್ಚಿರುವುದರಿಂದ, ಅವರು ನನಗೆ ಗಡಿಯನ್ನು ದಾಟಲು ಅವಕಾಶ ನೀಡುತ್ತಿಲ್ಲ. ನಾನು ನನ್ನ ವ್ಯಾನ್ ನಲ್ಲಿ ನಿದ್ರಿಸುತ್ತಿದ್ದು, ತೀವ್ರ ತೊಂದರೆಗೊಳಗಾಗಿದ್ದೇನೆ. ನನಗೆ ನೆರವು ಒದಗಿಸುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾರಿಗೆ ಮನವಿ ಮಾಡುತ್ತೇನೆ” ಎಂದು ತಿಳಿಸಿದ್ದಾರೆ.
“ನಾನು ಗಡಿ ಮುಚ್ಚಿರುವುದರಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದೇನೆ. ಗಡಿ ಬಳಿಯ ಪ್ರಾಧಿಕಾರಗಳು ಪಾಕಿಸ್ತಾನ ಪಾಸ್ ಪೋರ್ಟ್ ಹೊಂದಿರುವವರು ಮಾತ್ರ ಗಡಿಯನ್ನು ದಾಟಬಹುದು ಎಂದು ಪಟ್ಟು ಹಿಡಿದಿವೆ” ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
“ನಾನು ಭಾರತವನ್ನು ಪ್ರೀತಿಸುತ್ತೇನೆ. ನಾನು ಇಲ್ಲಿ ವ್ಯಾಸಂಗ ಮಾಡಿದ್ದು, ಪಹಲ್ಗಾಮ್ ನಲ್ಲಿ ಭಯೋತ್ಪಾದಕ ದಾಳಿ ನಡೆದಾಗ, ನಾನು ಅತ್ತಿದ್ದೆ. ನನ್ನ ರಸ್ತೆ ಮಾರ್ಗದ ವೀಸಾ ಇನ್ನು ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿದ್ದು, ನಾನು ಇರಾನ್ ಗೆ ಮರಳಬೇಕಿದೆ. ಅದಕ್ಕಿರುವ ಭೂಮಾರ್ಗ ಇದೊಂದೇ ಆಗಿದ್ದು, ನನಗೆ ಗಡಿ ದಾಟಲು ಅವಕಾಶ ನೀಡದಿದ್ದರೆ, ಇರಾನ್ ಗೆ ಮರಳಲು ನನಗೆ ಬೇರಾವುದೇ ದಾರಿ ತೋರುತ್ತಿಲ್ಲ”, ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ.
ಎಪ್ರಿಲ್ 22ರಂದು ಪಹಲ್ಗಾಮ್ ನ ಬೈಸರಣ್ ಹುಲ್ಲುಗಾವಲಿನ ಬಳಿ ನಡೆದಿದ್ದ ಭಯೋತ್ಪಾದಕ ದಾಳಿಯಲ್ಲಿ ಬಹುತೇಕ ಪ್ರವಾಸಿಗರೇ ಆಗಿದ್ದ 26 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದ ಘಟನೆಗೆ ಪ್ರತೀಕಾರದ ಕ್ರಮವಾಗಿ ಅಟ್ಟಾರಿ ಭೂಮಾರ್ಗ ತಪಾಸಣಾ ಠಾಣೆಯನ್ನು ಮುಚ್ಚಲಾಗಿದೆ.