ಪ್ರತಿಪಕ್ಷಗಳ ಬಗ್ಗೆ ಪ್ರೀತಿ ಇಲ್ಲವೇ?: ರಾಹುಲ್ ಗಾಂಧಿ ಘೋಷಣೆಯನ್ನು ಪ್ರಶ್ನಿಸಿದ ಆಪ್
ರಾಹುಲ್ ಗಾಂಧಿ| PHOTO : PTI
ಹೊಸದಿಲ್ಲಿ: ಇತ್ತೀಚಿಗೆ ಪಾಟ್ನಾದಲ್ಲಿ ನಡೆದಿದ್ದ ಪ್ರತಿಪಕ್ಷಗಳ ಸಭೆಯಲ್ಲಿ ಕಾಂಗ್ರೆಸ್ ಜೊತೆ ತೀವ್ರ ವಾಗ್ಯುದ್ಧ ನಡೆಸಿದ್ದ ಆಪ್, ಹೃದಯ ವೈಶಾಲ್ಯವನ್ನು ಮೆರೆಯುವಂತೆ ರಾಹುಲ್ ಗಾಂಧಿಯವರಿಗೆ ಮನವಿ ಮಾಡಿಕೊಂಡಿದೆ.
ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಅವರ ‘ಮೊಹಬ್ಬತ್ ಕಿ ದುಕಾನ್ ’ಹೇಳಿಕೆಯನ್ನು ಪ್ರಸ್ತಾಪಿಸಿದ ಹಿರಿಯ ಆಪ್ ನಾಯಕ ಹಾಗೂ ದಿಲ್ಲಿಯ ಆರೋಗ್ಯ ಸಚಿವ ಸೌರಭ ಭಾರದ್ವಾಜ್ ಅವರು, ರಾಹುಲ್ ಆಗಾಗ್ಗೆ ಪುನರುಚ್ಚರಿಸುತ್ತಿರುವ ‘ನಾನು ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿಯನ್ನು ತೆರೆದಿದ್ದೇನೆ ’ಎಂಬ ಹೇಳಿಕೆಯನ್ನು ತಾನು ಇಷ್ಟಪಡುತ್ತೇನೆ ಎಂದು ಹೇಳಿದರು.
‘ಸರ್, ದ್ವೇಷದ ಮಾರುಕಟ್ಟೆ ಇದೆ ಎನ್ನುವುದನ್ನು ನಾವು ನಂಬುತ್ತೇವೆ, ಆದರೆ ಅಲ್ಲಿ ನೀವು ಪ್ರೀತಿಯನ್ನೂ ನೀಡಬೇಕು. ಪ್ರತಿಪಕ್ಷಗಳು ಪ್ರೀತಿಯನ್ನು ಕೇಳಿಕೊಂಡು ನಿಮ್ಮ ಬಳಿ ಬಂದಾಗ ನನ್ನ ಬಳಿ ಪ್ರೀತಿಯಿಲ್ಲ ಎಂದು ನೀವು ಹೇಳಿದರೆ ಅದು ನಿಮ್ಮ ‘ಮೊಹಬ್ಬತ್ ಕಿ ದುಕಾನ್ ’ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತದೆ ’ ಎಂದರು.
ಸಾರ್ವಜನಿಕ ದೃಷ್ಟಿಕೋನದ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆಯನ್ನೂ ನೀಡಿದ ಭಾರದ್ವಾಜ್, ಪ್ರತಿಷ್ಠೆಯನ್ನು ಹೊಂದಿರುವುದು ಒಳ್ಳೆಯದು,ಆದರೆ ಅದಕ್ಕೂ ಒಂದು ಮಿತಿಯಿದೆ. ಈ ಮಿತಿಯಿಂದಾಚೆಗೆ ಜನರು ಮತ್ತು ಇತರ ಪಕ್ಷಗಳು ಆಡಳಿತ ಬದಲಾವಣೆಯ ಬಳಿಕ ನೂತನ ಸರಕಾರವು ಅತಿಯಾದ ಪ್ರತಿಷ್ಠೆಯನ್ನು ಹೊಂದಿದೆ ಎಂದು ಭಾವಿಸಲಾರಂಭಿಸುತ್ತಾರೆ ಎಂದು ಹೇಳಿದರು.
ಪ್ರತಿಪಕ್ಷಗಳು ರಾಜ್ಯಗಳಲ್ಲಿ ಪ್ರತಿಸ್ಪರ್ಧಿಗಳಾಗಿದ್ದವು, ಆದರೆ ಅವು ಈಗ ಒಂದಾಗುವ ಅಗತ್ಯವಿದೆ. ಹೀಗಾಗಿ ಪರಸ್ಪರರ ವಿರುದ್ಧ ಹಿಂದಿನ ಟೀಕೆಗಳನ್ನು ಮರೆಯುವಂತೆ ಭಾರದ್ವಾಜ್ ಅವುಗಳನ್ನು ಕೋರಿಕೊಂಡರು.
ಇತರರಿಗೆ,ನಿಮ್ಮ ಪ್ರತಿಸ್ಪರ್ಧಿಗಳಿಗೂ ಸ್ಥಾನಗಳನ್ನು ಬಿಟ್ಟು ಕೊಡುವುದು ನೋವಿನ ವಿಷಯವಾಗಿದೆ, ಅದಕ್ಕೆ ವಿಶಾಲ ಮನಸ್ಸು ಅಗತ್ಯವಾಗಿದೆ ಎಂದೂ ಅವರು ಹೇಳಿದರು.
ದಿಲ್ಲಿ ಸರಕಾರವು ತನ್ನ ಅಧಿಕಾರಶಾಹಿಯ ಮೇಲೆ ನಿಯಂತ್ರಣ ಹೊಂದಿರುವುದಕ್ಕೆ ಕಡಿವಾಣ ಹಾಕಲು ಉದ್ದೇಶಿಸಿರುವ ಕೇಂದ್ರದ ವಿವಾದಾತ್ಮಕ ಸುಗ್ರೀವಾಜ್ಞೆಯ ವಿರುದ್ಧ ತನ್ನ ಹೋರಾಟದಲ್ಲಿ ಕಾಂಗ್ರೆಸ್ ತನ್ನನ್ನು ಬೆಂಬಲಿಸಬೇಕು ಎಂಬ ಪೂರ್ವ ಷರತ್ತಿನೊಂದಿಗೆ ಆಪ್ ಪ್ರತಿಪಕ್ಷಗಳ ಸಭೆಯಲ್ಲಿ ಭಾಗವಹಿಸಿತ್ತು. ಆದರೆ ಈ ವಿಷಯವನ್ನು ಚರ್ಚಿಸಲು ಇದು ಸೂಕ್ತ ವೇದಿಕೆಯಲ್ಲ. ಸಂಸತ್ ಅಧಿವೇಶನಗಳಿಗೆ ಮುನ್ನ ಪ್ರತಿಪಕ್ಷಗಳ ಸಭೆಯಲ್ಲಿ ಇದರ ಕುರಿತು ಚರ್ಚಿಸಲಾಗುವುದು ಎಂದು ಕಾಂಗ್ರೆಸ್ ಹೇಳಿತ್ತು.