ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ: ಮುಸ್ಲಿಂ ಮತಗಳನ್ನು ಸೆಳೆಯುತ್ತಿರುವ ಐಎಸ್ಎಫ್; ಟಿಎಂಸಿ ಪಾಳಯದಲ್ಲಿ ತಲ್ಲಣ
ಸಾಂದರ್ಭಿಕ ಚಿತ್ರ (PTI)
ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ಪಂಚಾಯತ್ ಚುನಾವಣೆಯಲ್ಲಿ ಆಡಳಿತಾರೂಢ ಟಿಎಂಸಿ ಪಕ್ಷ ಪ್ರಾಬಲ್ಯ ಮೆರೆದಿದೆಯಾದರೂ, ಪಕ್ಷಕ್ಕೆ ಆತಂಕ ಸೃಷ್ಟಿಸುವಂತ ಹೊಸ ರಾಜಕೀಯ ಬೆಳವಣಿಗೆ ರಾಜ್ಯದಲ್ಲಿ ನಡೆಯುತ್ತಿದೆ. ಅನಿರೀಕ್ಷತವೆಂಬಂತೆ, ಇಂಡಿಯನ್ ಸೆಕ್ಯುಲರ್ ಫ್ರಂಟ್ (ISF) ಎಂಬ ಹೊಸ ಪಕ್ಷವು ಪಂಚಾಯತ್ ಚುನಾವಣೆಗಳಲ್ಲಿ ಉತ್ತಮ ಫಲಿತಾಂಶ ನೀಡಿದೆ.
2021 ರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದ ಐಎಸ್ಎಫ್ ಪಕ್ಷವು ಮುಸ್ಲಿಂ ಮತಗಳನ್ನು ಕೇಂದ್ರೀಕರಿಸಿವೆ. ಐಎಸ್ಎಫ್ ಬೆಳವಣಿಗೆಯು ಟಿಎಂಸಿಯ ಮತಬ್ಯಾಂಕ್ಗಳನ್ನು ಕ್ಷೀಣಿಸಲಿದೆ ಎಂದು ಸ್ಥಳೀಯ ರಾಜಕೀಯ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.
ರಾಜ್ಯದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಟಿಎಂಸಿಯ ಭದ್ರಕೋಟೆಯಾದ ಭಂಗಾರ್ನಲ್ಲಿ ಐಎಸ್ಎಫ್ ಪಂಚಾಯತ್ ಸ್ಥಾನಗಳಲ್ಲಿ ತನ್ನ ಖಾತೆ ತೆರೆದಿದ್ದು, ಉತ್ತರ 24 ಪರಗಣ, ಹೌರಾ ಸೇರಿದಂತೆ ಇತರ ಸಮೀಪದ ಜಿಲ್ಲೆಗಳಲ್ಲಿ ಕೂಡಾ ಐಎಸ್ಎಫ್ ಗಣನೀಯ ಸಾಧನೆಯನ್ನು ಪ್ರದರ್ಶಿಸಿದೆ. 2021 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ಬಂಗಾಳದ ಮುಸ್ಲಿಮರು ಮತ್ತು ದಲಿತರಿಗೆ ʼಸಾಮಾಜಿಕ ನ್ಯಾಯʼವನ್ನು ನೀಡುವ ಗುರಿಯೊಂದಿಗೆ ಫರ್ಫುರಾ ಷರೀಫ್ ಮುಖ್ಯಸ್ಥರಾದ ಪೀರ್ಜಾದಾ ಅಬ್ಬಾಸ್ ಸಿದ್ದಿಕಿ ಅವರು ಐಎಸ್ಎಫ್ ಪಕ್ಷ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದರು.
ಭಂಗಾರ್ ಪ್ರದೇಶದ ಚುನಾವಣಾ ಫಲಿತಾಂಶಗಳು ಆ ಪ್ರದೇಶದಲ್ಲಿ ಟಿಎಂಸಿ ತನ್ನ ಪ್ರಭಾವವನ್ನು ಕಳೆದುಕೊಳ್ಳಿತ್ತಿರುವುದು ಎತ್ತಿ ತೋರಿಸಿದೆ.
2006 ರ ಅಸೆಂಬ್ಲಿ ಚುನಾವಣೆಯಲ್ಲಿ, ಟಿಎಂಸಿ ನಾಯಕ ಅರಬುಲ್ ಇಸ್ಲಾಮ್ ಮೊದಲ ಬಾರಿಗೆ ಭಾಂಗಾರ್ನಲ್ಲಿ ಗೆದ್ದು, ಆ ಪ್ರದೇಶದಲ್ಲಿ ಪಕ್ಷದ ಅಸ್ತಿತ್ವವನ್ನು ದಾಖಲಿಸಿದ್ದರು. ಆದರೆ ನಂತರ, 2011 ರಲ್ಲಿ, ಟಿಎಂಸಿ ಭಾಂಗಾರ್ ಕ್ಷೇತ್ರವನ್ನು ಕಳೆದುಕೊಂಡಿತ್ತು. 2016 ರಲ್ಲಿ ಎಡ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದ ಅಬ್ದುರಝಾಕ್ ಮೊಲ್ಲಾ ಅವರನ್ನು ಟಿಎಂಸಿ ಕಣಕ್ಕಿಳಿಸಿತ್ತು. ಆದರೆ, 2021 ರಲ್ಲಿ ಡಾ. ರಿಝಾವುಲ್ ಕರೀಮ್ ಅವರಿಗೆ ಟಿಎಂಸಿ ಟಿಕೆಟ್ ನೀಡಿದ್ದು, ಇದು ಮೊಲ್ಲಾ ಅವರ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿತ್ತು. ಇದರಿಂದ ಟಿಎಂಸಿಯಲ್ಲಿ ಬಿರುಕು ಬಿದ್ದು ಆ ಚುನಾವಣೆಯಲ್ಲಿ ಟಿಎಂಸಿಯ ಅಭ್ಯರ್ಥಿ ಡಾ. ರಿಝಾವುಲ್ ಕರೀಮ್ ರನ್ನು ಐಎಸ್ಎಫ್ ಪಕ್ಷದ ನೌಷಾದ್ ಸಿದ್ದೀಕಿ ಅವರು ಸೋಲಿಸಿದ್ದರು.
2013 ರಿಂದ ಈ ಪ್ರದೇಶದಲ್ಲಿ ಭೂಸ್ವಾಧೀನದ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ರಾಜ್ಯ ಸರ್ಕಾರವು ಪವರ್ ಗ್ರಿಡ್ ಯೋಜನೆಗಾಗಿ 13 ಎಕರೆಗಳನ್ನು ಸ್ವಾಧೀನಪಡಿಸಿಕೊಂಡ ನಂತರ ಈ ಹೋರಾಟವು ಪ್ರಾರಂಭವಾಗಿತ್ತು.
2016 ರಲ್ಲಿ, ಗ್ರಾಮಸ್ಥರು ರಸ್ತೆಗಳನ್ನು ತಡೆದು ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದು, ಇದರಲ್ಲಿ ಇಬ್ಬರು ಪ್ರತಿಭಟನಾಕಾರರು ಸಾವನ್ನಪ್ಪಿದ್ದರು. ಇದು ಟಿಎಂಸಿ ವಿರುದ್ಧ ಈ ಪ್ರದೇಶದಲ್ಲಿ ಅಸಮಾಧಾನಕ್ಕೂ ಕಾರಣವಾಗಿತ್ತು.
ಭೂಸ್ವಾಧೀನದ ವಿರುದ್ಧ ಪ್ರತಿಭಟಿಸಲು ಈ ಪ್ರದೇಶದಲ್ಲಿ ರಚಿಸಲಾದ (Jomi Jibika Bastutantro O Poribesh Raksha Committee )ಸಮಿತಿಯು ಪಂಚಾಯತ್ ಚುನಾವಣೆಯಲ್ಲಿ ಐಎಸ್ಎಫ್ ಜೊತೆ ಕೈಜೋಡಿಸಿದೆ. ಅದನ್ನು ಟಿಎಂಸಿಯ ಒಬ್ಬ ನಾಯಕರು ಕೂಡಾ ಒಪ್ಪಿಕೊಂಡಿದ್ದಾರೆ.
“(ಭಾಂಗಾರ್ನಲ್ಲಿ) ಭೂಸ್ವಾಧೀನದ ವಿರುದ್ಧ ಹೋರಾಡಿದವರು ಈಗ ಐಎಸ್ಎಫ್ ಜೊತೆಗೆ ಇದ್ದಾರೆ. ಬಹುತೇಕ ಎಲ್ಲಾ ಸಿಪಿಐ(ಎಂ) ಸದಸ್ಯರು ಕೂಡ ಈಗ ಐಎಸ್ಎಫ್ನಲ್ಲಿದ್ದಾರೆ. ಒಂದರ ಹಿಂದೆ ಒಂದರಂತೆ ನಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ನಾವು ಎದುರಿಸುತ್ತಿದ್ದೇವೆ, ಹಲವು ಕ್ಷೇತ್ರಗಳಲ್ಲಿ ಮುಸ್ಲಿಂ ಮತಗಳು ಸಂಪೂರ್ಣವಾಗಿ ಐಎಸ್ಎಫ್ನತ್ತ ವಾಲಿವೆ. ಭಾಂಗಾರ್ನ ಅನೇಕ ಹಳ್ಳಿಗಳಲ್ಲಿ, ನಮಗೆ ಈಗ ನೆಲೆಯೂ ಇಲ್ಲ” ಎಂದು ಟಿಎಂಸಿಯ ನಾಯಕರೊಬ್ಬರು ಹೇಳಿದ್ದಾರೆ.
ಕಳೆದ ವರ್ಷ ಜನವರಿಯಲ್ಲಿ ಟಿಎಂಸಿ ಹಾಗೂ ಐಎಸ್ಎಫ್ ಕಾರ್ಯಕರ್ತರು ಕೋಲ್ಕತ್ತಾದ ಬೀದಿಗಳಲ್ಲಿ ಘರ್ಷಣೆ ಮಾಡಿದ್ದರು, ಅರಬುಲ್ ಇಸ್ಲಾಂ ನೇತೃತ್ವದ ಟಿಎಂಸಿ ಕಾರ್ಯಕರ್ತರು ತನ್ನ ಕಾರ್ಯಕರ್ತರ ಮೇಲೆ ದಾಳಿಗಳನ್ನು ಮಾಡಿದ್ದಾರೆ ಎಂದು ಆರೋಪಿಸಿ ISF ಪ್ರತಿಭಟನೆ ನಡೆಸಿತ್ತು. ಘರ್ಷಣೆಯಲ್ಲಿ ಕನಿಷ್ಠ ಎಂಟು ಪೊಲೀಸರು ಗಾಯಗೊಂಡಿದ್ದರು, ಘಟನೆಗೆ ಸಂಬಂಧಿಸಿ ಐಎಸ್ಎಫ್ ಶಾಸಕ ನೌಶಾದ್ ಸಿದ್ದಿಕಿ ಮತ್ತು ಅವರ 17 ಬೆಂಬಲಿಗರನ್ನು ಬಂಧಿಸಲಾಗಿತ್ತು. 42 ದಿನಗಳ ನಂತರವಷ್ಟೇ ನೌಶಾದ್ಗೆ ಜಾಮೀನು ಸಿಕ್ಕಿತ್ತು.
ಇದು ಇತ್ತೀಚಿನ ಪಂಚಾಯತ್ ಚುನಾವಣೆಗಳಲ್ಲಿ ಪರಿಣಾಮ ಬೀರಿದೆ ಎನ್ನಲಾಗಿದೆ. ಪಂಚಾಯಿತಿ ಚುನಾವಣೆಗೆ ಭಾಂಗಾರ್ನ ಮೊದಲ ಬ್ಲಾಕ್ನಲ್ಲಿ ಒಂದೇ ಒಂದೂ ಸ್ಥಾನಗಳಲ್ಲಿ ಸ್ಪರ್ಧಿಸಲೂ ಐಎಸ್ಎಫ್ಗೆ ಅವಕಾಶ ಮಾಡಿಕೊಡಲಿಲ್ಲ ಎಂದು ಆರೋಪಿಸಲಾಗಿದೆ. ಅದಾಗ್ಯೂ, ಭಾಂಗಾರ್ ನ ಬ್ಲಾಕ್ ಎರಡರಲ್ಲಿ, ಐಎಸ್ಎಫ್ ಮೈತ್ರಿಕೂಟವು 218 ಗ್ರಾಮ ಪಂಚಾಯತ್ ಸ್ಥಾನಗಳಲ್ಲಿ 132 ರಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಮೂರು ಮಿತ್ರಪಕ್ಷಗಳು ಒಟ್ಟಾಗಿ 68 ಸ್ಥಾನಗಳನ್ನು ಗೆದ್ದಿವೆ. ಐಎಸ್ಎಫ್ ಮಾತ್ರ 43 ಸ್ಥಾನಗಳನ್ನು ಗೆದ್ದಿವೆ.
ಟಿಎಂಸಿ ಭಯೋತ್ಪಾದನೆ ಇಲ್ಲದಿದ್ದರೆ, ಭಾಂಗಾರ್ನ I ಮತ್ತು II ಬ್ಲಾಕ್ಗಳೆರಡರಲ್ಲೂ ISF ಹೆಚ್ಚಿನ ಗ್ರಾಮ ಪಂಚಾಯತ್ ಸ್ಥಾನಗಳನ್ನು ಗೆಲ್ಲುತ್ತಿತ್ತು ಎಂದು ಐಎಸ್ಎಫ್ ಶಾಸಕ ನೌಶಾದ್ ಹೇಳಿದ್ದಾರೆ.
ಅದಾಗ್ಯೂ, ಫಲಿತಾಂಶ ಆಶಾವಾದಿಯಾಗಿದೆ ಎಂದು ಐಎಸ್ಎಫ್ ನಾಯಕ ತಪಾಶ್ ಚಕ್ರವರ್ತಿ ಹೇಳಿದ್ದಾರೆ.
“ನಾವು ಬಂಕುರಾ, ಹೌರಾ, ಹೂಗ್ಲಿಯಲ್ಲಿಯೂ ಗ್ರಾಮ ಪಂಚಾಯಿತಿ ಸ್ಥಾನಗಳನ್ನು ಗೆದ್ದಿದ್ದೇವೆ. ಪಶ್ಚಿಮ ಬಂಗಾಳದ ಜನರು ಬಿಜೆಪಿ ಮತ್ತು ಟಿಎಂಸಿ ಹೊರತುಪಡಿಸಿ ಪರ್ಯಾಯ ರಾಜಕೀಯ ಶಕ್ತಿಗಾಗಿ ಹುಡುಕುತ್ತಿದ್ದಾರೆ. ನಮ್ಮ ಪಕ್ಷದೊಂದಿಗೆ ಅಪಾರ ಸಂಖ್ಯೆಯ ಯುವಕರು ಸೇರಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ನಾವು ನಮ್ಮ ಸಂಘಟನೆಯನ್ನು ರಾಜ್ಯಾದ್ಯಂತ ವಿಸ್ತರಿಸುತ್ತೇವೆ.” ಎಂದು ಚಕ್ರವರ್ತಿ ಹೇಳಿದ್ದಾರೆ.
ಕೃಪೆ: indianexpress.com