ಇಶಾ ಪ್ರತಿಷ್ಠಾನ ಕುರಿತು ಹೈಕೋರ್ಟ್ ಆದೇಶ | ಎರಡು ವರ್ಷಗಳ ಬಳಿಕ ಪ್ರಶ್ನಿಸಿದ್ದಕ್ಕಾಗಿ ತಮಿಳುನಾಡು ಮಾಲಿನ್ಯ ಮಂಡಳಿಯನ್ನು ಟೀಕಿಸಿದ ಸುಪ್ರೀಂ

ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ಪರಿಸರ ಅನುಮತಿಯನ್ನು ಪಡೆಯದಿದ್ದಕ್ಕಾಗಿ ಜಗ್ಗಿ ವಾಸುದೇವ ಅವರ ಇಶಾ ಪ್ರತಿಷ್ಠಾನಕ್ಕೆ ನೀಡಲಾಗಿದ್ದ ನೋಟಿಸನ್ನು ರದ್ದುಗೊಳಿಸಿದ್ದ ಮದ್ರಾಸ್ ಉಚ್ಚ ನ್ಯಾಯಾಲಯದ ಆದೇಶವನ್ನು ಎರಡು ವರ್ಷಗಳ ಬಳಿಕ ಪ್ರಶ್ನಿಸಿದ್ದಕ್ಕಾಗಿ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಕಟುವಾಗಿ ಟೀಕಿಸಿದೆ.
ಸಕಾಲದಲ್ಲಿ ಈ ನ್ಯಾಯಾಲಯವನ್ನು ಸಂಪರ್ಕಿಸಲು ಅಧಿಕಾರಿಗಳನ್ನು ಯಾವುದು ತಡೆದಿತ್ತು ಎಂದು ಮಂಡಳಿಯನ್ನು ಪ್ರಶ್ನಿಸಿದ ಸರ್ವೋಚ್ಚ ನ್ಯಾಯಾಲಯವು, ಸರಕಾರವು ವಿಳಂಬಿಸಿದಾಗ ನಮಗೆ ಸಂಶಯ ಮೂಡುತ್ತದೆ ಎಂದು ಹೇಳಿತು.
ಮಂಡಳಿಯು ಇಶಾ ಪ್ರತಿಷ್ಠಾನಕ್ಕೆ ಹೊರಡಿಸಿದ್ದ ಶೋ-ಕಾಸ್ ನೋಟಿಸ್ನ್ನು ಮದ್ರಾಸ್ ಉಚ್ಚ ನ್ಯಾಯಾಲಯವು ಡಿಸೆಂಬರ್ 2022ರಲ್ಲಿ ರದ್ದುಗೊಳಿಸಿತ್ತು. 2006 ಮತ್ತು 2014ರ ನಡುವೆ ಕೊಯಮತ್ತೂರು ಜಿಲ್ಲೆಯ ವೆಳ್ಳಿಯಂಗಿರಿ ತಪ್ಪಲಿನಲ್ಲಿ ಪರಿಸರ ಅನುಮತಿಯನ್ನು ಪಡೆಯದೆ ಹಲವಾರು ಕಟ್ಟಡಗಳನ್ನು ನಿರ್ಮಿಸಿದ್ದಕ್ಕಾಗಿ ಇಶಾ ಪ್ರತಿಷ್ಠಾನದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದ ಮಂಡಳಿಯು ಪೂರ್ವಭಾವಿಯಾಗಿ ಶೋ-ಕಾಸ್ ನೋಟಿಸನ್ನು ಹೊರಡಿಸಿತ್ತು.
ಪ್ರತಿಷ್ಠಾನವು ಶಿಕ್ಷಣ ಸಂಸ್ಥೆಯ ವ್ಯಾಖ್ಯೆಯಲ್ಲಿ ಬರುವುದರಿಂದ ನಿರ್ಮಾಣ ಚಟುವಟಿಕೆಗಳಿಗೆ ಪರಿಸರ ಅನುಮತಿ ಪಡೆಯುವುದರಿಂದ ವಿನಾಯಿತಿಯನ್ನು ಹೊಂದಿದೆ ಎಂದು ಉಚ್ಚ ನ್ಯಾಯಾಲಯವು ತೀರ್ಪು ನೀಡಿತ್ತು.
ಜನವರಿ 2022ರಲ್ಲಿ ಮಂಡಳಿಯ ನೋಟಿಸನ್ನು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ ಪ್ರತಿಷ್ಠಾನವು,2014ರ ಪರಿಸರ ರಕ್ಷಣೆ ತಿದ್ದುಪಡಿ ನಿಯಮಗಳು ಶಿಕ್ಷಣ ಸಂಸ್ಥೆಗಳಿಗೆ ಪೂರ್ವಾನ್ವಯ ವಿನಾಯಿತಿಯನ್ನು ನೀಡಿವೆ ಎಂದು ವಾದಿಸಿತ್ತು.
ತಾನು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹೆಚ್ಚಿಸಲು ನೆರವಾಗುವ ಯೋಗ ಕೇಂದ್ರವಾಗಿರುವುದರಿಂದ ತನ್ನನ್ನು ಶಿಕ್ಷಣ ಸಂಸ್ಥೆಯೆಂದು ವರ್ಗೀಕರಿಸಬೇಕು ಎಂದೂ ಪ್ರತಿಷ್ಠಾನವು ವಾದಿಸಿದ್ದು, ಅದನ್ನು ಉಚ್ಚ ನ್ಯಾಯಾಲಯವು ಪುರಸ್ಕರಿಸಿತ್ತು.
ಯೋಗ ಕೇಂದ್ರವನ್ನು ಶಿಕ್ಷಣ ಸಂಸ್ಥೆಯನ್ನಾಗಿ ವರ್ಗೀಕರಿಸಿದ್ದನ್ನು ತಡವಾಗಿ ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಶುಕ್ರವಾರ ಮಾಲಿನ್ಯ ನಿಯಂತ್ರಣ ಮಂಡಳಿಗೆ ತಿಳಿಸಿದ ಸರ್ವೋಚ್ಚ ನ್ಯಾಯಾಲಯವು, ಯೋಗ ಕೇಂದ್ರವು ಶಿಕ್ಷಣ ಸಂಸ್ಥೆಯಲ್ಲ ಎಂದು ನೀವು ಹೇಗೆ ಹೇಳುತ್ತೀರಿ? ಅವರು ಯೋಜನೆಗೆ ಅನುಗುಣವಾಗಿ ನಡೆದುಕೊಂಡಿರದಿದ್ದರೆ ನೀವು ಕ್ರಮ ತೆಗೆದುಕೊಳ್ಳಬಹುದು. ಆದರೆ ನಿಮ್ಮ ಕಣ್ಣೆದುರೇ ನಿರ್ಮಿಸಲಾದ ಕಟ್ಟಡವನ್ನು ಕೆಡವಲು ನಿಮಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಹೇಳಿತು.
ಇಶಾ ಪ್ರತಿಷ್ಠಾನವು ಈಗಾಗಲೇ ವೆಳ್ಳಿಯಂಗಿರಿಯಲ್ಲಿ ಯೋಗ ಮತ್ತು ಧ್ಯಾನ ಕೇಂದ್ರವನ್ನು ನಿರ್ಮಿಸಿರುವುದನ್ನು ಪರಿಗಣಿಸಿ ಸರಕಾರವು ಈಗ ಪರಿಸರ ಅನುಸರಣೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ಮಂಡಳಿಗೆ ತಿಳಿಸಿತು.
ಪ್ರತಿಷ್ಠಾನದ ಇಶಾ ಯೋಗ ಕೇಂದ್ರವಿರುವ ಪಶ್ಚಿಮ ಘಟ್ಟದಲ್ಲಿಯ ವೆಳ್ಳಿಯಂಗಿರಿ ಬೆಟ್ಟಗಳ ಸಮೀಪದ ಇಕ್ಕರೈ ಪೂಲುವಂಪಟ್ಟಿ ಗ್ರಾಮದಲ್ಲಿ ಈ ವಿವಾದಾತ್ಮಕ ನಿರ್ಮಾಣಗಳಿವೆ. ಬೆಟ್ಟ ಪ್ರದೇಶಗಳನ್ನು ಅತಿಯಾದ ವಾಣಿಜ್ಯೀಕರಣದಿಂದ ರಕ್ಷಿಸಲು ತಮಿಳುನಾಡು ಸರಕಾರವು 1991ರಲ್ಲಿ ಅಸ್ತಿತ್ವಕ್ಕೆ ತಂದಿದ್ದ ಗುಡ್ಡ ಪ್ರದೇಶ ಸಂರಕ್ಷಣಾ ಪ್ರಾಧಿಕಾರದ ಅಡಿಯಲ್ಲಿ ಈ ಗ್ರಾಮವನ್ನು ಅಧಿಸೂಚಿಸಲಾಗಿದೆ.
ನವಂಬರ್ 2012ರಲ್ಲಿ ಕೊಯಿಮತ್ತೂರು ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯು ತಪಾಸಣೆ ನಡೆಸಿದ ಸಂದರ್ಭದಲ್ಲಿ ಪ್ರತಿಷ್ಠಾನಕ್ಕೆ ಸಂಬಂಧಿಸಿದ 60 ಕಟ್ಟಡಗಳನ್ನು ಪೂರ್ವಾನುಮತಿ ಇಲ್ಲದೆ ನಿರ್ಮಿಸಲಾಗಿದೆ ಎನ್ನುವುದನ್ನು ಕಂಡುಕೊಂಡಿತ್ತು ಮತ್ತು ಆ ಸಮಯದಲ್ಲಿ ಇತರ 34 ಕಟ್ಟಡಗಳು ನಿರ್ಮಾಣ ಹಂತದಲ್ಲಿದ್ದವು.