“ಮಾಂಸ ಮಾಡುವವರಿಗೆ ಇಸ್ಕಾನ್ ಮಾರಿದಷ್ಟು ಗೋವುಗಳನ್ನು ಬೇರೆ ಯಾರೂ ಮಾರಿಲ್ಲ”: ಬಿಜೆಪಿ ಸಂಸದೆ ಮೇನಕಾ ಆರೋಪ ಅಲ್ಲಗಳೆದ ಇಸ್ಕಾನ್
ಮೇನಕಾ ಗಾಂಧಿ | PHOTO: PTI
ಹೊಸದಿಲ್ಲಿ : ಮಾಂಸ ಮಾಡುವವರಿಗೆ ಇಸ್ಕಾನ್ ಮಾರಿದಷ್ಟು ಗೋವುಗಳನ್ನು ಬೇರೆ ಯಾರೂ ಮಾರಿಲ್ಲ ಎಂದು ಮಾಜಿ ಕೇಂದ್ರ ಸಚಿವೆ ಹಾಗೂ ಬಿಜೆಪಿ ಸಂಸದೆ ಮೇನಕಾ ಗಾಂಧಿ ಅವರು ಇಸ್ಕಾನ್ ವಿರುದ್ಧ ಸ್ಪೋಟಕ ಆರೋಪ ಮಾಡಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ.
ಆರೋಪಕ್ಕೆ ಪ್ರತಿಕ್ರಿಯಿಸಿರುವ ಇಸ್ಕಾನ್ ಸಂಸ್ಥೆಯು, “ಮನೇಕಾ ಗಾಂಧಿಯವರ ಆರೋಪವು ಅಸಮರ್ಥನೀಯ ಹಾಗೂ ಸುಳ್ಳು” ಎಂದು ಹೇಳಿದೆ.
“ಇಸ್ಕಾನ್ ಸಂಸ್ಥೆಯು ಗೋವು ಹಾಗೂ ಎತ್ತಿನ ರಕ್ಷಣೆ ಮತ್ತು ಆರೈಕೆಯಲ್ಲಿ ಮುಂಚೂಣಿಯಲ್ಲಿದ್ದು, ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿ ಈ ಕೆಲಸವನ್ನು ಮಾಡುತ್ತಿದೆ. ಗೋವುಗಳು ಹಾಗೂ ಎತ್ತುಗಳನ್ನು ಅವು ಜೀವಂತವಿರುವವರೆಗೂ ಆರೈಕೆ ಮಾಡಲಾಗುತ್ತಿದ್ದು, ಮೇನಕಾ ಗಾಂಧಿ ಆರೋಪಿಸಿರುವಂತೆ ಅವುಗಳನ್ನು ಮಾಂಸ ಮಾಡುವವರಿಗೆ ಮಾರಾಟ ಮಾಡಲಾಗುತ್ತಿಲ್ಲ” ಎಂದು ಇಸ್ಕಾನ್ ನ ವಕ್ತಾರ ಯುಧಿಷ್ಠಿರ್ ಗೋವಿಂದ ದಾಸ್ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
“ಒಂದು ನಿಮಿಷ. ನಾನು ನಿಮಗೆ ಹೇಳಿಬಿಡುತ್ತೇನೆ. ಈ ದೇಶದಲ್ಲಿ ಅತೀ ದೊಡ್ಡ ಮೋಸಗಾರರು ಎಂದರೆ ಅದು ಇಸ್ಕಾನ್. ಅವರು ಗೋ ಶಾಲೆಗಳನ್ನು ಮಾಡುತ್ತಾರೆ. ಅವರಿಗೆ ಗೋ ಶಾಲೆ ನಡೆಸಲು ಸರ್ಕಾರದಿಂದ ಸವಲತ್ತುಗಳು, ದೊಡ್ಡ ದೊಡ್ಡ ಜಮೀನುಗಳು, ಗೋಮಾಳಗಳು ಎಲ್ಲವೂ ಸಿಗುತ್ತವೆ. ಇತ್ತೀಚೆಗಷ್ಟೇ ನಾನು ಇಸ್ಕಾನ್ ನ ಅನಂತಪುರದ ಗೋ ಶಾಲೆಗೆ ಹೋಗಿದ್ದೆ. ಅಲ್ಲಿ ಒಂದೇ ಒಂದು ಸೊರಗಿದ ಹಸುವೂ ಇರಲಿಲ್ಲ. ಸಂಪೂರ್ಣ ಹೈನುಗಾರಿಕೆ ಯೋಗ್ಯವಾದ ಹಸುಗಳು, ಒಂದೇ ಒಂದು ಕರುವೂ ಇರಲಿಲ್ಲ. ಎಲ್ಲಾ ಕರುಗಳು ಮಾರಾಟವಾಗಿದೆ ಎಂಬುದು ಇದರ ಅರ್ಥ. ಬೀದಿ ಬೀದಿಗಳಲ್ಲಿ ಹರೇ ರಾಮ್-ಹರೇ ಕೃಷ್ಣ ಎಂದು ಹೇಳುತ್ತಾರೆ. ಹಾಲಿನಲ್ಲೇ ಅವರ ಜೀವನವಿದೆ ಎನ್ನುತ್ತಾರೆ. ಅವರು ಮಾಂಸ ಮಾಡುವವರಿಗೆ ಮಾರಿದಷ್ಟು ಗೋವುಗಳನ್ನು ಬಹುಷಃ ಬೇರೆ ಯಾರೂ ಮಾರಿರಲಿಕ್ಕಿಲ್ಲ. ಇವರೇ ಹೀಗೆ ಮಾಡಿರುವಾಗ ಬೇರೆಯವರ ಕಥೆಯೇನು?” ಎಂದು ಬಿಜೆಪಿ ಸಂಸದೆ ಮೇನಕಾ ಗಾಂಧಿ ಆರೋಪಿಸಿದ ವೀಡಿಯೋ ವೈರಲ್ ಆಗಿತ್ತು.