ಬಾಂಗ್ಲಾದೇಶದಲ್ಲಿ ಇಸ್ಕಾನ್ ನಾಯಕ ಚಿನ್ಮೋಯ್ ಕೃಷ್ಣ ದಾಸ್ ಬಂಧನ : ಭಾರತ ಖಂಡನೆ
ಚಿನ್ಮೋಯ್ ಕೃಷ್ಣ ದಾಸ್ | PC : indiatoday.in
ಹೊಸದಿಲ್ಲಿ : ಬಾಂಗ್ಲಾದೇಶದಲ್ಲಿ ಇಸ್ಕಾನ್ ನಾಯಕ ಚಿನ್ನೋಯ್ ಕೃಷ್ಣ ದಾಸ್ ಅವರ ಬಂಧನ ಹಾಗೂ ಜಾಮೀನು ನಿರಾಕರಣೆ ಕುರಿತು ಭಾರತ ತೀವ್ರವಾಗಿ ಖಂಡಿಸಿದೆ.
ಮಂಗಳವಾರ ಜಾಮೀನು ಅರ್ಜಿ ತಿರಸ್ಕರಿಸಿದ ಬಳಿಕ ಚಿತ್ತಗಾಂಗ್ ನ್ಯಾಯಾಲಯ ಚಿನ್ಮೋಯ್ ಕೃಷ್ಣ ದಾಸ್ ಅವರನ್ನು ಕಾರಾಗೃಹಕ್ಕೆ ಕಳುಹಿಸಿದೆ.
ದಾಸ್ ಅವರು ಬಾಂಗ್ಲಾದೇಶದ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಅವರ ವಿರುದ್ಧ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ದೇಶದ್ರೋಹದ ಪ್ರಕರಣ ದಾಖಲಾಗಿದೆ.
‘‘ಚಿನ್ಮೋಯ್ ಕೃಷ್ಣ ದಾಸ್ ಅವರ ಬಂಧನ ಹಾಗೂ ಜಾಮೀನು ನಿರಾಕರಣೆಯನ್ನು ನಾವು ತೀವ್ರ ಕಳವಳದಿಂದ ಗಮನಿಸಿದ್ದೇವೆ. ಬಾಂಗ್ಲಾದೇಶದಲ್ಲಿ ಹಿಂದೂಗಳು ಹಾಗೂ ಇತರ ಅಲ್ಪಸಂಖ್ಯಾತರ ಮೇಲೆ ನಡೆಸಿದ ದಾಳಿಯ ವಿರುದ್ಧ ನಡೆದ ಪ್ರತಿಭಟನೆ ಬಳಿಕ ಈ ಬೆಳವಣಿಗೆ ನಡೆದಿದೆ. ಇಲ್ಲಿ ಅಲ್ಪಸಂಖ್ಯಾತರ ಮನೆ, ಅಂಗಡಿಗಳಿಗೆ ಬೆಂಕಿ ಹಚ್ಚಿದ, ಲೂಟಿಗೈದ, ಕಳವುಗೈದ, ನಾಶ ಮಾಡಿದ, ದೇವರ ಮೂರ್ತಿ ಹಾಗೂ ದೇವಾಲಯಗಳನ್ನು ಅಪವಿತ್ರಗೊಳಿಸಿದ ಪ್ರಕರಣಗಳು ನಡೆದಿವೆ’’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣದೀರ್ ಜೈಸ್ವಾಲ್ ಮಂಗಳವಾರ ತಿಳಿಸಿದ್ದಾರೆ.