ಇಸ್ರೇಲ್-ಹಮಾಸ್ ಯುದ್ಧ: ಇಸ್ರೇಲಿ ನಂಟು ಹೊಂದಿರುವ 14 ಭಾರತೀಯ ಶೇರುಗಳು
Photo: NDTV
ಹೊಸದಿಲ್ಲಿ: ಇಸ್ರೇಲ್-ಹಮಾಸ್ ಯುದ್ಧದ ಪರಿಣಾಮವಾಗಿ ಮುಂಬೈನ ದಲಾಲ್ ಸ್ಟ್ರೀಟ್ ಸೇರಿದಂತೆ ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಆತಂಕದ ಮಾರಾಟವಿಲ್ಲದಿದ್ದರೂ ಈ ಸಂಘರ್ಷವು ಇಸ್ರೇಲ್ನಲ್ಲಿ ಉಪಸ್ಥಿತಿಯನ್ನು ಹೊಂದಿರುವ ಹಲವಾರು ಭಾರತೀಯ ಕಂಪನಿಗಳತ್ತ ಗಮನವನ್ನು ಸೆಳೆದಿದೆ.
ಇಸ್ರೇಲಿನ ಹೈಫಾ ಬಂದರಿನ ಒಡೆತನವನ್ನು ಹೊಂದಿರುವ ಅದಾನಿ ಪೋರ್ಟ್ಸ್ನ ಶೇರುಗಳು ಸೋಮವಾರ ಶೇ.5ರಷ್ಟು ಕುಸಿದಿದ್ದವಾದರೂ ಮಂಗಳವಾರ ಚೇತರಿಸಿಕೊಂಡಿವೆ. ಅದಾನಿ ಪೋರ್ಟ್ಸ್ನ ವಹಿವಾಟಿನಲ್ಲಿ ಹೈಫಾ ಬಂದರಿನ ಕೊಡುಗೆ ತುಲನಾತ್ಮಕವಾಗಿ ಸಣ್ಣದಾಗಿದ್ದು,ಒಟ್ಟು ಕಾರ್ಗೊ ಪ್ರಮಾಣದ ಶೇ.3ರಷ್ಟಿದೆ. ಕಂಪನಿಯು ನಿನ್ನೆ ಇದನ್ನು ಸ್ಪಷ್ಪಪಡಿಸಿತ್ತು.
ಇಸ್ರೇಲ್ನ ಟ್ಯಾರೋ ಫಾರ್ಮಾಸ್ಯುಟಿಕಲ್ನಲ್ಲಿ ಬಹುಪಾಲು ಶೇರುಗಳನ್ನು ಹೊಂದಿರುವ ಸನ್ ಫಾರ್ಮಾಸ್ಯುಟಿಕಲ್ನ ಶೇರುಗಳು ಸೋಮವಾರ ಶೇ.2ರಷ್ಟು ಕುಸಿದಿದ್ದವಾದರೂ ಮಂಗಳವಾರ ಅಲ್ಪ ಪ್ರಮಾಣದಲ್ಲಿ ಚೇತರಿಕೆಯನ್ನು ಕಂಡಿವೆ. ಡಾ.ರೆಡ್ಡೀಸ್ ಮತ್ತು ಲುಪಿನ್ ಕೂಡ ಇಸ್ರೇಲ್ ನಂಟು ಹೊಂದಿದ್ದು. ಅವುಗಳ ಶೇರುಗಳ ಮೇಲೆ ಹೂಡಿಕೆದಾರರು ನಿಗಾಯಿರಿಸಿದ್ದಾರೆ.
ಎನ್ಎಂಡಿಸಿ,ಕಲ್ಯಾಣ ಜ್ಯುವೆಲರ್ಸ್ ಮತ್ತು ಟೈಟಾನ್ ಕೂಡ ಇಸ್ರೇಲ್ನೊಂದಿಗೆ ನಂಟು ಹೊಂದಿವೆ.
ಪ್ರಮುಖ ಐಟಿ ಕಂಪನಿಗಳಾದ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ (ಟಿಸಿಎಸ್), ವಿಪ್ರೊ,ಟೆಕ್ ಮಹಿಂದ್ರಾ ಮತ್ತು ಇನ್ಫೋಸಿಸ್ ಜೊತೆಗೆ ಎಸ್ಬಿಐ ಮತ್ತು ಲಾರ್ಸೆನ್ ಆ್ಯಂಡ್ ಟುಬ್ರೋ ಕೂಡ ಇಸ್ರೇಲ್ನಲ್ಲಿ ಉಪಸ್ಥಿತಿಯನ್ನು ಹೊಂದಿವೆ. ಮಧ್ಯಪ್ರಾಚ್ಯದ ಬಿಕ್ಕಟ್ಟು ತೈಲ ಮಾರಾಟ ಕಂಪನಿಗಳ ಮೇಲೂ ನಕರಾತ್ಮಕ ಪರಿಣಾಮಗಳನ್ನು ಬೀರುತ್ತವೆ. ಈ ವರ್ಷದಲ್ಲಿ ನಡೆಯಲಿರುವ ಪಂಚರಾಜ್ಯ ವಿಧಾನಸಭಾ ಚುನಾವಣೆಗಳು ಮತ್ತು ಮುಂದಿನ ವರ್ಷದ ಲೋಕಸಭಾ ಚುನಾವಣೆಗಳಿಗೆ ಮುನ್ನ ಸ್ಥಳೀಯ ತೈಲ ಬೆಲೆಗಳನ್ನು ಜಾಗತಿಕ ಕಚ್ಚಾತೈಲ ಬೆಲೆಗಳ ಏರಿಕೆಗೆ ಹೊಂದಿಸುವುದು ಈ ಕಂಪನಿಗಳಿಗೆ ಕಠಿಣವಾಗಲಿದೆ.
ಜಿ20 ಶೃಂಗಸಭೆಯಲ್ಲಿ ಪ್ರಕಟಿಸಲಾಗಿದ್ದ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ನಿರ್ಮಾಣದ ಭಾರತದ ಯೋಜನೆಯ ಮೇಲೆ ಯುದ್ಧವು ಪರಿಣಾಮ ಬೀರಬಹುದು ಎಂಬ ಭೀತಿಯಿಂದ ಇರ್ಕಾನ್,ಜ್ಯುಪಿಟರ್ ವ್ಯಾಗನ್ಸ್,ಆರ್ವಿಎನ್ಎಲ್ ಮತ್ತು ಐಆರ್ಎಫ್ಸಿ ಶೇರುಗಳು ಸೋಮವಾರ ಶೇ.5ರಿಂದ ಶೇ.6ರಷ್ಟು ಕುಸಿದಿದ್ದವಾದರೂ ಮಂಗಳವಾರ ವಹಿವಾಟಿನಲ್ಲಿ ಚೇತರಿಕೆಯನ್ನು ಕಂಡಿವೆ. ಕಾರಿಡಾರ್ ರೈಲ್ವೆ ಸಂಬಂಧಿತ ಕಂಪನಿಗಳಿಗೆ ಮತ್ತು ಹಡಗು ನಿರ್ಮಾಣ ಉದ್ಯಮದ ಪಾಲಿಗೆ ಧನಾತ್ಮಕವಾಗಲಿದೆ ಎಂದು ಪರಿಗಣಿಸಲಾಗಿದೆ. ಶಿಪ್ಪಿಂಗ್ ಕಾರ್ಪೊರೇಷನ್ನ ಶೇರುಗಳು ಸೋಮವಾರ ಶೇ.5ರಷ್ಟು ಕುಸಿದಿದ್ದವಾದರೂ ಮಂಗಳವಾರದ ವಹಿವಾಟಿನಲ್ಲಿ ಚೇತರಿಸಿಕೊಂಡಿವೆ.
ಮಧ್ಯಪ್ರಾಚ್ಯದಲ್ಲಿಯ ಜಾಗತಿಕ ಭೌಗೋಲಿಕ-ರಾಜಕೀಯ ಅನಿಶ್ಚಿತತೆ ಮತ್ತು ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳೊಂದಿಗೆ ಯುದ್ಧವೂ ಹೂಡಿಕೆದಾರರಲ್ಲಿ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.
‘ಭಾರತೀಯ ಶೇರು ಮಾರುಕಟ್ಟಗೆ ಸಂಬಂಧಿಸಿದಂತೆ ಹೇಳುವುದಾದರೆ ಆತಂಕ ಪಡಲು ಯಾವುದೇ ಕಾರಣವಿದೆ ಎಂದು ನಾವು ಭಾವಿಸಿಲ್ಲ, ಆದರೆ ಜಾಗತಿಕ ಮಾರುಕಟ್ಟೆಗಳಲ್ಲಿಯ ಪ್ರವೃತ್ತಿಯನ್ನು ದೇಶಿಯ ಮಾರುಕಟ್ಟೆಗಳು ಪ್ರತಿಬಿಂಬಿಸಲಿವೆ. ಸದ್ಯಕ್ಕಂತೂ ನಾವು ಕಳವಳಗೊಂಡಿಲ್ಲ,ಏಕೆಂದರೆ ಈ ಇಸ್ರೇಲ್-ಹಮಾಸ್ ಸಂಘರ್ಷ ವಿಕಸನಗೊಳ್ಳುತ್ತಿರುವ ಸ್ಥಿತಿಯಾಗಿದೆ ಮತ್ತು ಅದಕ್ಕೆ ನಾವು ಪ್ರತಿಕ್ರಿಯಿಸುವ ಮುನ್ನ ಒಂದೆರಡು ದಿನಗಳ ಕಾಲ ಕಾಯುವ ಅಗತ್ಯವಿದೆ’ ಎಂದು ತೇಜಿಮಂದಿಯ ಉಪಾಧ್ಯಕ್ಷ (ಸಂಶೋಧನೆ) ರಾಜ್ ವ್ಯಾಸ್ ಹೇಳಿದರು.
ಯುದ್ಧದ ಪರಿಣಾಮಗಳು ಬಾಂಡ್ ಮತ್ತು ಶೇರು ಮಾರುಕಟ್ಟೆಗಳಲ್ಲಿ ತಾತ್ಕಾಲಿಕ ಏರಿಳಿತಗಳನ್ನು ಒಳಗೊಂಡಿವೆ ಎಂದು ಇನ್ಫಾರ್ಮೆರಿಕ್ಸ್ ರೇಟಿಂಗ್ಸ್ನ ಮುಖ್ಯ ಅರ್ಥಶಾಸ್ತ್ರಜ್ಞ ಡಾ.ಮನೋರಂಜನ ಶರ್ಮಾ ಹೇಳಿದರು.
ಹಮಾಸ್ನ ಪ್ರಮುಖ ಬೆಂಬಲಿಗ ದೇಶವಾಗಿರುವ ಇರಾನ್ ಒಂದು ವೇಳೆ ಯುದ್ಧದಲ್ಲಿ ಭಾಗಿಯಾದರೆ ಕಚ್ಚಾ ತೈಲಗಳ ಬೆಲೆಗಳು ಹೆಚ್ಚಲಿವೆ ಮತ್ತು ಇದು ಭಾರತಕ್ಕೆ ಕಚ್ಚಾ ತೈಲ ಪೂರೈಕೆಗೆ ವ್ಯತ್ಯಯವನ್ನುಂಟು ಮಾಡುವುದರಿಂದ ಮಾರುಕಟ್ಟೆಯಲ್ಲಿ ಅಪಾಯಕ್ಕೆ ನಾಂದಿ ಹಾಡಬಹುದು ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್ನ ಡಾ.ವಿ.ಕೆ.ವಿಜಯಕುಮಾರ ಅಭಿಪ್ರಾಯ ವ್ಯಕ್ತಪಡಿಸಿದರು.