ಹಮಾಸ್ ಮೇಲೆ ನಿಷೇಧ ಹೇರಲು ಭಾರತಕ್ಕೆ ಇಸ್ರೇಲ್ ಒತ್ತಡ

PC: x.com/WIONews
ಹೊಸದಿಲ್ಲಿ: ಗಾಝಾ ಪಟ್ಟಿಯಲ್ಲಿ ಹಮಾಸ್ ನಿರ್ಮೂಲನೆಗೊಳಿಸಲು ಪಣ ತೊಟ್ಟಿರುವ ಇಸ್ರೇಲ್, ಹಮಾಸ್ ಸಂಘಟನೆಯನ್ನು ʼಉಗ್ರ ಸಂಘಟನೆʼ ಎಂದು ಘೋಷಿಸುವಂತೆ ಭಾರತದ ಮೇಲೆ ಒತ್ತಡ ಮುಂದುವರಿಸಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆದ 'ಕಾಶ್ಮೀರ ಸಾಲಿಡಾರಿಟಿ ಡೇ' ಸಮಾರಂಭದ ವೇಳೆ ಹಲವು ಮಂದಿ ಹಮಾಸ್ ನಾಯಕರು ಭಾಗವಹಿಸಿದ ಹಿನ್ನೆಲೆಯಲ್ಲಿ ಇಸ್ರೇಲ್ ತನ್ನ ಆಗ್ರಹವನ್ನು ಪುನರುಚ್ಚರಿಸಿದೆ.
ಲಷ್ಕರ್-ಇ-ತೊಯ್ಬಾ ಮತ್ತು ಜೈಶ್-ಇ-ಮೊಹ್ಮದ್ ನಂತಹ ಸಂಘಟನೆಗಳ ಮುಖಂಡರ ಜತೆ ಹಮಾಸ್ ಮುಖಂಡರು ಕೂಡಾ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದ್ದು ಬಹುಶಃ ಇದೇ ಮೊದಲು. ಈ ಸಂಬಂಧ ಭಾರತೀಯ ಅಧಿಕಾರಿಗಳ ಜತೆ ಇಸ್ರೇಲ್ ಮಾತುಕತೆ ನಡೆಸಿದೆ ಎಂದು ತಿಳಿದು ಬಂದಿದೆ. ಭಯೋತ್ಪಾದನೆ ನಿಗ್ರಹದಲ್ಲಿ ಇಸ್ರೇಲ್ ಗೆ ನಿರಂತರ ಬೆಂಬಲ ನೀಡುತ್ತಾ ಬಂದಿರುವ ಭಾರತ 2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ನಡೆದ ದಾಳಿಯನ್ನೂ ಕಟುವಾಗಿ ಖಂಡಿಸಿತ್ತು. ಆದರೆ ಅಮೆರಿಕ ಮತ್ತು ಯೂರೋಪಿಯನ್ ಒಕ್ಕೂಟದಂತೆ ಹಮಾಸ್ ಅನ್ನು ನಿಷೇಧಿಸುವ ನಿರ್ಧಾರ ಕೈಗೊಂಡಿಲ್ಲ.
ಮುಂಬೈ ದಾಳಿ ನಡೆಸಿದ ಪಾಕಿಸ್ತಾನ ಮೂಲದ ಎಲ್ಇಟಿ ಸಂಘಟನೆಯನ್ನು ಇಸ್ರೇಲ್ 2023ರಲ್ಲಿ ನಿಷೇಧಿಸಿತ್ತು. ಅಂದು ಭಾರತದಲ್ಲಿ ಇಸ್ರೇಲ್ ರಾಯಭಾರಿಯಾಗಿದ್ದ ನವೋರ್ ಗಿಲನ್, ಭಾರತ ಕೂಡಾ ಹಮಾಸ್ ನಿಷೇಧಿಸುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಹಮಾಸ್ ನ ಚಟುವಟಿಕೆಗಳ ಬಗ್ಗೆ ಭಾರತಕ್ಕೆ ಮಾಹಿತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದರು.
ಭಾರತದ ಸಂಸತ್ತಿನಲ್ಲಿ ಕೂಡಾ ಹಮಾಸ್ ನಿಷೇಧಿಸುವ ಪ್ರಶ್ನೆ ಬಂದಾಗ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇದಕ್ಕೆ ಸ್ಪಂದಿಸಿ, ಯುಎಪಿಎ ಅಡಿಯಲ್ಲಿ ಮಾತ್ರವೇ ಒಂದು ಸಂಘಟನೆಯನ್ನು ಉಗ್ರ ಸಂಘಟನೆ ಎಂದು ಕರೆಯಲು ಸಾಧ್ಯ. ಕಾಯ್ದೆಯಡಿ ಈ ಸಾಧ್ಯತೆಗಳನ್ನು ಸರ್ಕಾರದ ಇಲಾಖೆಗಳು ಪರಿಶೀಲಿಸುತ್ತಿವೆ ಎಂದು ಹೇಳಿಕೆ ನೀಡಿತ್ತು.