ದ.ಆಫ್ರಿಕಾದಿಂದ ರಾಯಭಾರಿ ಹಿಂದಕ್ಕೆ ಕರೆಸಿಕೊಂಡ ಇಸ್ರೇಲ್
Eliav Belotserkovsķ, Photo: X/Am_Blujay
ಟೆಲ್ಅವೀವ್: ದಕ್ಷಿಣ ಆಫ್ರಿಕಾದಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯನ್ನು ಮುಚ್ಚಬೇಕೆಂದು ಕೋರುವ ನಿರ್ಣಯದ ಬಗ್ಗೆ ಮಂಗಳವಾರ ಆ ದೇಶದ ಸಂಸತ್ತಿನಲ್ಲಿ ಮತದಾನ ನಡೆಯುತ್ತಿರುವ ನಡುವೆಯೇ, ದಕ್ಷಿಣ ಆಫ್ರಿಕಾದಿಂದ ತನ್ನ ರಾಯಭಾರಿಯನ್ನು ಇಸ್ರೇಲ್ ವಾಪಾಸು ಕರೆಸಿಕೊಂಡಿರುವುದಾಗಿ ವರದಿಯಾಗಿದೆ.
ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಯುದ್ಧದ ಬಳಿಕ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧದಲ್ಲಿ ಬಿರುಕು ಮೂಡಿದೆ. ಗಾಝಾದಲ್ಲಿ ಸಾವಿರಾರು ಫೆಲೆಸ್ತೀನೀಯರ ಹತ್ಯೆಯಾಗಿದ್ದು ಇಸ್ರೇಲ್ ಯುದ್ಧಾಪರಾಧ ಎಸಗುತ್ತಿರುವುದಾಗಿ ತನ್ನ ದೇಶ ಭಾವಿಸುತ್ತದೆ ಎಂದು ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಮಫೋಸ ಇತ್ತೀಚೆಗೆ ಹೇಳಿದ್ದರು.
`ದಕ್ಷಿಣ ಆಫ್ರಿಕಾ ಅಧ್ಯಕ್ಷರ ಇತ್ತೀಚಿನ ಹೇಳಿಕೆಯ ಬಳಿಕ ಆ ದೇಶಕ್ಕೆ ಇಸ್ರೇಲ್ ರಾಯಭಾರಿ ಎಲಿಯಾವ್ ಬೆಲೊಟ್ಸೆರ್ಕೋಸ್ಕಿಯನ್ನು ಸಮಾಲೋಚನೆಗಾಗಿ ವಾಪಾಸು ಕರೆಸಿಕೊಳ್ಳಲಾಗಿದೆ' ಎಂದು ಇಸ್ರೇಲ್ ನ ವಿದೇಶಾಂಗ ಇಲಾಖೆ ಹೇಳಿದೆ. ಗಾಝಾದಲ್ಲಿ ಕದನ ವಿರಾಮ ಜಾರಿಯಾಗುವವರೆಗೆ ಇಸ್ರೇಲ್ ಜತೆಗಿನ ಎಲ್ಲಾ ಸಂಬಂಧಗಳನ್ನೂ ಕಡಿದುಕೊಳ್ಳಬೇಕು ಮತ್ತು ಆ ದೇಶದ ರಾಯಭಾರ ಕಚೇರಿಯನ್ನು ಮುಚ್ಚಬೇಕೆಂದು ಕೋರುವ ನಿರ್ಣಯವನ್ನು ಎಡಪಂಥೀಯ ವಿರೋಧ ಪಕ್ಷ `ಇಕನಾಮಿಕ್ ಫ್ರೀಡಂ ಫೈಟರ್ಸ್' ಮಂಡಿಸಿದ್ದು ಇದಕ್ಕೆ ಆಡಳಿತಾರೂಢ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್(ಎಎನ್ಸಿ) ಮತ್ತು ಇತರ ಕೆಲವು ಸಣ್ಣ ಪಕ್ಷಗಳು ಬೆಂಬಲ ಸೂಚಿಸಿದೆ. ಗಾಝಾದಲ್ಲಿ ಇಸ್ರೇಲ್ ನರಮೇಧ ನಡೆಸುತ್ತಿದೆ ಎಂದು ಆರೋಪಿಸಿದ್ದ ದಕ್ಷಿಣ ಆಫ್ರಿಕಾ, ಈ ಬಗ್ಗೆ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ತನಿಖೆ ನಡೆಸಬೇಕು ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಬೇಕು ಎಂದು ಆಗ್ರಹಿಸಿದೆ.
ಈ ತಿಂಗಳ ಆರಂಭದಲ್ಲಿ ದಕ್ಷಿಣ ಆಫ್ರಿಕಾವು ಇಸ್ರೇಲ್ನಲ್ಲಿದ್ದ ತನ್ನ ರಾಯಭಾರಿಯನ್ನು ಮತ್ತು ತನ್ನ ಎಲ್ಲಾ ರಾಜತಾಂತ್ರಿಕ ಸಿಬಂದಿಗಳನ್ನು ವಾಪಾಸು ಕರೆಸಿಕೊಂಡಿತ್ತು. ಈ ಮಧ್ಯೆ, ಮಂಗಳವಾರ `ಬ್ರಿಕ್ಸ್' ಗುಂಪಿನ ನಡುವೆ ವರ್ಚುವಲ್ ವೇದಿಕೆಯಲ್ಲಿ ನಡೆಯಲಿರುವ ಸಭೆಯಲ್ಲಿ ಗಾಝಾ ಸಂಘರ್ಷ ಪ್ರಮುಖ ಅಜೆಂಡಾ ಆಗಿರಲಿದೆ. ದಕ್ಷಿಣ ಆಫ್ರಿಕಾ, ರಶ್ಯ ಮತ್ತು ಚೀನಾದ ಅಧ್ಯಕ್ಷರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.