ರಫಾದಲ್ಲಿರುವ ನಿರಾಶ್ರಿತ ಫೆಲೆಸ್ತೀನೀಯರ ಮೇಲೆ ಇಸ್ರೇಲ್ ದಾಳಿಗೆ ಭಾರತ ಕಳವಳ
"ಸಾರ್ವಭೌಮ, ಸ್ವತಂತ್ರ ಫೆಲೆಸ್ತೀನ್ ಸ್ಥಾಪನೆಗೆ ಭಾರತ ಬೆಂಬಲ"
PC : NDTV
ಹೊಸದಿಲ್ಲಿ: ದಕ್ಷಿಣದ ಗಾಝಾದ ರಫಾದಲ್ಲಿರುವ ನಿರಾಶ್ರಿತ ಫೆಲೆಸ್ತೀನೀಯರ ಮೇಲೆ ಇಸ್ರೇಲ್ ನಡೆಸಿದ ವಾಯು ದಾಳಿಗಳಲ್ಲಿ ಉಂಟಾದ ಸಾವುನೋವುಗಳಿಂದ ತೀವ್ರ ನೋವುಂಟಾಗಿದೆ ಹಾಗೂ ಇದು ಆತಂಕದ ವಿಚಾರವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
ಮೇ 26ರಂದು ರಫಾ ನಗರದಲ್ಲಿ ಫೆಲೆಸ್ತೀನಿ ನಿರಾಶ್ರಿತರು ಆಶ್ರಯ ಪಡೆದಿದ್ದ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ವಾಯುದಾಳಿಗಳಲ್ಲಿ ಕನಿಷ್ಠ 45 ಜನರು ಮೃತಪಟ್ಟಿದ್ದರು.
ಫೆಲೆಸ್ತೀನ್ನ ಉತ್ತರ ಭಾಗಗಳಲ್ಲಿ ಇಸ್ರೇಲ್ ದಾಳಿಗಳ ನಂತರ ನಿರಾಶ್ರಿತ ಫೆಲೆಸ್ತೀನೀಯರಿಗೆ ರಫಾ ಏಕೈಕ ಆಶ್ರಯತಾಣವಾಗಿ ಪರಿಣಮಿಸಿತ್ತು.
“ದಾಳಿಗಳ ವೇಳೆ ನಾಗರಿಕರನ್ನು ರಕ್ಷಿಸಲು ಹಾಗೂ ಅಂತರರಾಷ್ಟ್ರೀಯ ಮಾನವೀಯ ಕಾನೂನನ್ನು ಗೌರವಿಸಬೇಕೆಂದು ಭಾರತ ಸತತ ಹೇಳುತ್ತಾ ಬಂದಿದೆ,” ಎಂದು ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಭಾರತ ಯಾವತ್ತೂ ಎರಡು ರಾಷ್ಟ್ರಗಳ ಪರಿಹಾರಕ್ಕೆ ಬೆಂಬಲ ಸೂಚಿಸಿದೆ ಹಾಗೂ ಸಾರ್ವಭೌಮ ಮತ್ತು ಸ್ವತಂತ್ರ ಫೆಲೆಸ್ತೀನ್ ಸ್ಥಾಪನೆಗೆ ಬೆಂಬಲಿಸಿದೆ, ಎಂದೂ ವಕ್ತಾರರು ಹೇಳಿದ್ದಾರೆ.