ಗಾಝಾದಿಂದ ಇಸ್ರೇಲಿ ಪಡೆಗಳ ವಾಪಸಾತಿ ಆರಂಭ: ವರದಿ

PC : PTI
ಜೆರುಸಲೇಂ: ಕದನ ವಿರಾಮ ಒಪ್ಪಂದ ಜಾರಿಗೂ ಮುನ್ನ ಗಾಝಾದ ರಫಾದಿಂದ ಫಿಲಾಡೆಲ್ಫಿ ಕಾರಿಡಾರ್ವರೆಗೆ, ಈಜಿಪ್ಟ್ ಮತ್ತು ಗಾಝಾ ನಡುವಿನ ಗಡಿಯುದ್ದಕ್ಕೂ ಇಸ್ರೇಲಿ ಪಡೆಗಳ ವಾಪಸಾತಿ ಪ್ರಾರಂಭವಾಗಿದೆ ಎಂದು ಮಾಧ್ಯಮಗಳು ರವಿವಾರ ವರದಿ ಮಾಡಿವೆ.
ಗಾಝಾ ಕದನ ವಿರಾಮಕ್ಕೆ ಸಂಬಂಧಿಸಿ ರವಿವಾರದ ಕೆಲವು ಮಹತ್ವದ ಬೆಳವಣಿಗೆಗಳು:
► ರವಿವಾರ ಬೆಳಿಗ್ಗೆ 9:15ಕ್ಕೆ ಕದನ ವಿರಾಮ ಜಾರಿಗೊಂಡ 15 ನಿಮಿಷಗಳ ಬಳಿಕ ನೆರವನ್ನು ಹೊತ್ತುತಂದ ಪ್ರಥಮ ಟ್ರಕ್ ಗಾಝಾವನ್ನು ಪ್ರವೇಶಿಸಿದೆ ಎಂದು ಆಕ್ರಮಿತ ಫೆಲೆಸ್ತೀನಿಯನ್ ಪ್ರಾಂತದಲ್ಲಿನ ವಿಶ್ವಸಂಸ್ಥೆ ಒಸಿಎಚ್ಎ (ಮಾನವೀಯ ಸಮನ್ವಯಕ್ಕಾಗಿ ವಿಶ್ವಸಂಸ್ಥೆಯ ಕಚೇರಿ) ಮುಖ್ಯಸ್ಥರು ಹೇಳಿದ್ದಾರೆ.
► ಬಿಡುಗಡೆಗೊಳ್ಳಲಿರುವ ಫೆಲೆಸ್ತೀನಿಯನ್ ಕೈದಿಗಳ ಪಟ್ಟಿ ಇಸ್ರೇಲ್ ಜೈಲು ಇಲಾಖೆಯ ಅಧಿಕಾರಿಗಳಿಗೆ ರವಾನೆ. ಒಪ್ಪಂದದ ಪ್ರಕಾರ ಕೈದಿಗಳ ಬಿಡುಗಡೆ ಕಾರ್ಯವಿಧಾನದ ಬಗ್ಗೆ ಗಮನ ಹರಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
► ಬಿಡುಗಡೆಗೊಳ್ಳಲಿರುವ ಕೈದಿಗಳನ್ನು ರಮಲ್ಲಾ ಬಳಿಯ `ಆಫರ್' ಜೈಲಿನ ಸ್ವಾಗತ ಕೇಂದ್ರಕ್ಕೆ ವರ್ಗಾಯಿಸಲಾಗುತ್ತದೆ. ಇಲ್ಲಿಗೆ ಬಂದ ಮೇಲೆ ರೆಡ್ಕ್ರಾಸ್ ಪ್ರತಿನಿಧಿಗಳು ಕೈದಿಗಳನ್ನು ಗುರುತಿಸಲಿದ್ದಾರೆ. ಗಾಝಾದಲ್ಲಿ ಒತ್ತೆಯಾಳುಗಳು ಇಲ್ಲಿಗೆ ಬರುವ ತನಕ ಕಾಯಲಾಗುತ್ತದೆ. ಬಳಿಕ ಫೆಲೆಸ್ತೀನಿಯನ್ ಕೈದಿಗಳನ್ನು ಆಫರ್ ಜೈಲಿನಿಂದ ಬಿಡುಗಡೆ ಸ್ಥಳಕ್ಕೆ ರೆಡ್ಕ್ರಾಸ್ ವರ್ಗಾಯಿಸುತ್ತದೆ.