ನೆತನ್ಯಾಹು ಭೂ ಯುದ್ಧ ಸಿದ್ಧತೆ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಗಾಝಾ ಪ್ರವೇಶಿಸಿದ ಇಸ್ರೇಲಿ ಟ್ಯಾಂಕರ್ ಗಳು
Photo- PTI
ಜೆರುಸಲೇಂ: ಹಮಾಸ್ ನಿಯಂತ್ರಿತ ಗಾಝಾಗೆ ಇಸ್ರೇಲಿ ಟ್ಯಾಂಕರ್ ಗಳ ತುಕಡಿ ಹಾಗೂ ಭೂ ಸೇನೆ ರಾತ್ರೋರಾತ್ರಿ ದಾಳಿ ನಡೆಸಿದ್ದು, ತಮ್ಮ ತಾಯ್ನೆಲಕ್ಕೆ ಮರಳುವ ಮುನ್ನ ಅಸಂಖ್ಯಾತ ಗುರಿಗಳನ್ನು ಹೊಡೆದುರುಳಿಸಲಾಗುತ್ತಿದೆ ಎಂದು ಗುರುವಾರ ಇಸ್ರೇಲ್ ಹೇಳಿದೆ ಎಂದು AFP ಸುದ್ದಿ ಸಂಸ್ಥೆ ವರದಿ ಮಾಡಿದೆ.
ಭೂ ಯುದ್ಧದ ಸಿದ್ಧತೆಗಳು ಪ್ರಗತಿಯಲ್ಲಿವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಘೋಷಿಸಿದ ಕೆಲವೇ ಗಂಟೆಗಳಲ್ಲಿ ತಾನು ಫೆಲೆಸ್ತೀನ್ ಉತ್ತರ ಪ್ರಾಂತ್ಯವನ್ನು ಆಕ್ರಮಿಸಿಕೊಂಡಿದೆ ಎಂದು ಇಸ್ರೇಲ್ ಸೇನಾಪಡೆ ಪ್ರಕಟಿಸಿದೆ.
ಈ ಕಾರ್ಯಾಚರಣೆಯನ್ನು ಹಮಾಸ್, ಮೂಲಸೌಕರ್ಯಗಳು ಹಾಗೂ ಟ್ಯಾಂಕರ್ ನಿರೋಧಕ ಕ್ಷಿಪಣಿ ಉಡಾವಣಾ ಕೇಂದ್ರಗಳ ಮೇಲೆ ಗುರಿಯಿರಿಸಿ ನಡೆಸಲಾಗುತ್ತಿರುವ ದಾಳಿ ಎಂದು ಇಸ್ರೇಲ್ ರಕ್ಷಣಾ ಪಡೆಗಳು ವ್ಯಾಖ್ಯಾನಿಸಿವೆ.
ಕಾರ್ಯಾಚರಣೆಯು ಮುಂದಿನ ಹಂತದ ಯುದ್ಧಕ್ಕಾಗಿನ ಸಿದ್ಧತೆ ಎಂದು ಹೇಳಿರುವ ರಕ್ಷಣಾ ಪಡೆಗಳು, “ಯೋಧರು ಆ ಪ್ರದೇಶವನ್ನು ತೊರೆದಿದ್ದು, ಇಸ್ರೇಲ್ ಪ್ರದೇಶಕ್ಕೆ ಮರಳಿದ್ದಾರೆ” ಎಂದೂ ಹೇಳಿವೆ.
ಸೇನಾಪಡೆಯು ಬಿಡುಗಡೆ ಮಾಡಿರುವ ಕಪ್ಪುಬಿಳುಪಿನ ವಿಡಿಯೊ ತುಣುಕಿನಲ್ಲಿ, ಶಸ್ತ್ರಾಸ್ತ್ರಸಜ್ಜಿತ ವಾಹನಗಳು ಹಾಗೂ ಬುಲ್ಡೋಝರ್ ಗಳು ಗಡಿ ಬೇಲಿಯಂತೆ ಕಾಣುವ ಪ್ರದೇಶದತ್ತ ಧಾವಿಸುತ್ತಾ, ಅದನ್ನು ಹೊಡೆದುರುಳಿಸುತ್ತಿರುವುದನ್ನು ಕಾಣಬಹುದಾಗಿದೆ.
ಈ ಪ್ರದೇಶವು ಇಸ್ರೇಲ್ ನಗರವಾದ ಅಶ್ಕೆಲೊನ್ ನ ದಕ್ಷಿಣ ಭಾಗ ಎಂದು AFP ಸುದ್ದಿ ಸಂಸ್ಥೆ ಧೃಡಪಡಿಸಿದ್ದರೂ, ಈ ವೀಡಿಯೊ ತುಣಕನ್ನು ಯಾವಾಗ ಚಿತ್ರೀಕರಿಸಲಾಗಿದೆ ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.