ಗಾಝಾದಲ್ಲಿಯ ಅಲ್-ಅಹ್ಲಿ ಆಸ್ಪತ್ರೆಯನ್ನು ಸುತ್ತುವರಿದಿರುವ ಇಸ್ರೇಲಿ ಟ್ಯಾಂಕುಗಳು
ಸಾಂದರ್ಭಿಕ ಚಿತ್ರ | Photo: NDTV
ಜೆರುಸೆಲೇಂ: ಗಾಝಾ ನಗರದಲ್ಲಿರುವ ಅಲ್-ಅಹ್ಲಿ ಬಾಪ್ಟಿಸ್ಟ್ ಆಸ್ಪತ್ರೆಯನ್ನು ಇಸ್ರೇಲಿ ಟ್ಯಾಂಕ್ ಗಳು ಸುತ್ತುವರಿದಿವೆ ಎಂದು ಮಿಡ್ಲ್ ಈಸ್ಟ್ ಮಾನಿಟರ್ ವರದಿ ಮಾಡಿದೆ. ಈ ನಡುವೆ ಗಾಝಾದ ಅಲ್-ಶಿಫಾ ಆಸ್ಪತ್ರೆಯಲ್ಲಿರುವ 7,000ಕ್ಕೂ ಅಧಿಕ ನಿರಾಶ್ರಿತರು, ರೋಗಿಗಳು ಮತ್ತು ವೈದ್ಯಕೀಯ ಸಿಬ್ಬಂದಿ ಇಸ್ರೇಲ್ ಮಿಲಿಟರಿಯ ದಿಗ್ಬಂಧನದಿಂದ ಉಂಟಾಗಿರುವ ನೀರು ಮತ್ತು ಆಹಾರದ ಕೊರತೆಯಿಂದಾಗಿ ಸಾವಿನೊಂದಿಗೆ ಹೋರಾಡುತ್ತಿದ್ದಾರೆ. ಆಸ್ಪತ್ರೆಯಲ್ಲಿರುವ ಶಿಶುಗಳಿಗೆ ಹಾಲೂ ಲಭ್ಯವಾಗುತ್ತಿಲ್ಲ ಎಂದು ಗಾಝಾ ಮಾಧ್ಯಮ ಕಚೇರಿಯು ವರದಿ ಮಾಡಿದೆ.
ಟೆಲಿಗ್ರಾಮ್ ಚಾನೆಲ್ ನಲ್ಲಿ ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ ಕಚೇರಿಯು ಅಲ್ಲಿನ ಚಿಂತಾಜನಕ ಪರಿಸ್ಥಿತಿಯನ್ನು ಒತ್ತಿ ಹೇಳಿದೆ.
ವಿದ್ಯುತ್ ವ್ಯತ್ಯಯದಿಂದಾಗಿ ಇನಕ್ಯುಬೇಟರ್ಗಳು ಸ್ಥಗಿತಗೊಂಡಿದ್ದು, ಆಸ್ಪತ್ರೆಯಲ್ಲಿನ ಹಲವಾರು ಅಪೌಷ್ಟಿಕ ಮಕ್ಕಳನ್ನು ನಾವು ಕಳೆದುಕೊಳ್ಳಬಹುದು ಎಂದು ಅದು ತಿಳಿಸಿದೆ.
ಮಾಧ್ಯಮ ಕಚೇರಿಯು 650 ರೋಗಿಗಳು ಮತ್ತು ಸುಮಾರು 7,000 ನಿರ್ವಸಿತರಿರುವ ಅಲ್-ಶಿಫಾ ಆಸ್ಪತ್ರೆಯಲ್ಲಿನ ಘೋರ ಸ್ಥಿತಿಯನ್ನು ಎತ್ತಿ ತೋರಿಸಿದೆ. ಜೀವನಾವಶ್ಯಕ ಸಾಮಗ್ರಿಗಳ ಅನುಪಸ್ಥಿತಿಯಲ್ಲಿ ವೈದ್ಯಕೀಯ ತಂಡಗಳು, ರೋಗಿಗಳು ಮತ್ತು ನಿರಾಶ್ರಿತರು ಬದುಕುಳಿಯಲು ಹೋರಾಡುತ್ತಿದ್ದಾರೆ.
ಇಸ್ರೇಲಿ ಪಡೆಗಳು ಆಸ್ಪತ್ರೆಯ ಆವರಣದಲ್ಲಿಯ ಎಲ್ಲ ವಾಹನಗಳನ್ನು ಧ್ವಂಸಗೊಳಿಸಿವೆ ಹಾಗೂ ವೈದ್ಯಕೀಯ ಸಿಬ್ಬಂದಿ ಅಥವಾ ರೋಗಿಗಳಿಗೆ ಆಸ್ಪತ್ರೆಯನ್ನು ತೊರೆಯಲು ಅವಕಾಶ ನೀಡುತ್ತಿಲ್ಲ ಎಂದು ಹೇಳಿಕೆಯು ಬೆಟ್ಟು ಮಾಡಿದೆ.
ಗಾಝಾ ಮಾಧ್ಯಮ ಕಚೇರಿಯು ಆಸ್ಪತ್ರೆಯ ಆವರಣದಲ್ಲಿ ಇರುವವರನ್ನು ರಕ್ಷಿಸಲು ತುರ್ತು ಅಂತರರಾಷ್ಟ್ರೀಯ ಹಸ್ತಕ್ಷೇಪಕ್ಕೆ ಆಗ್ರಹಿಸಿದೆ.
ಫೆಲೆಸ್ತೀನ್ ರೆಡ್ ಕ್ರೆಸೆಂಟ್ ಸೊಸೈಟಿ (ಪಿಆರ್ಸಿಎಸ್)ಯ ಪ್ರಕಾರ, ಇಸ್ರೇಲಿ ಆಕ್ರಮಣವು ಸತತ 41ನೇ ದಿನಕ್ಕೆ ಮುಂದುವರಿದಿದ್ದರೂ ತಮ್ಮ ಕುಟುಂಬ ಮತ್ತು ಮಕ್ಕಳಿಂದ ಬೇರ್ಪಟ್ಟಿರುವ ಅರೆ ವೈದ್ಯಕೀಯ ಸಿಬ್ಬಂದಿಗಳು ಸವಾಲಿನ ಸ್ಥಿತಿಗಳು ಮತ್ತು ನಿತ್ಯ ರಕ್ತಪಾತವು ಉಂಟುಮಾಡಿರುವ ಮಾನಸಿಕ ಪರಿಣಾಮದ ನಡುವೆಯೂ ತಮ್ಮ ಮಾನವೀಯ ಕರ್ತವ್ಯವನ್ನು ಮುಂದುವರಿಸಿದ್ದಾರೆ.
ಖಾನ್ ಯೂನಿಸ್ ನಲ್ಲಿಯ ಅಲ್-ಅಮಲ್ ಆಸ್ಪತ್ರೆ ಮತ್ತು ತನ್ನ ಮುಖ್ಯಕಚೇರಿಯಲ್ಲಿ ಕಳೆದ ನಾಲ್ಕು ದಿನಗಳಿಂದ ವಿದ್ಯುತ್ ಮತ್ತು ನೀರಿನ ಪೂರೈಕೆ ಸ್ಥಗಿತಗೊಂಡಿದೆ ಎಂದು ಪಿಆರ್ಸಿಎಸ್ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದೆ.
ಪಿಆರ್ಸಿಎಸ್ ನ ತುರ್ತು ವೈದ್ಯಕೀಯ ಸೇವೆ ತಂಡಗಳು ಈಗಲೂ ಅಲ್-ಅಹ್ಲಿ ಆಸ್ಪತ್ರೆಯಲ್ಲಿ ಸಿಕ್ಕಿಹಾಕಿಕೊಂಡಿವೆ. ಪ್ರದೇಶದಲ್ಲಿ ಸ್ಫೋಟದ ಮತ್ತು ತೀವ್ರ ಗುಂಡಿನ ದಾಳಿಗಳ ಶಬ್ದ ಕೇಳಿ ಬರುತ್ತಿದೆ. ಆಸ್ಪತ್ರೆಯ ಅಂಗಳದಲ್ಲಿ ಹಲವಾರು ಗಾಯಾಳುಗಳಿದ್ದಾರೆ. ಕೇವಲ 30 ಮೀ.ಗಳ ದೂರದಲ್ಲಿದ್ದರೂ ನಮ್ಮ ತಂಡಗಳಿಗೆ ಅವರನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂದೂ ಅದು ಹೇಳಿದೆ.
ರಾತ್ರಿಯಿಡೀ ತೀವ್ರ ದಾಳಿಗಳನ್ನು ನಡೆಸಿ ಕನಿಷ್ಠ ಮೂವರು ಫೆಲೆಸ್ತೀನಿಗಳನ್ನು ಬಲಿ ತೆಗೆದುಕೊಂಡಿರುವ ಇಸ್ರೇಲಿ ಪಡೆಗಳು ಶುಕ್ರವಾರ ಬೆಳಿಗ್ಗೆ ಪಶ್ಚಿಮ ದಂಡೆಯ ಜೆನಿನ್ ನಗರದಿಂದ ಹಿಂದೆ ಸರಿದಿವೆ ಎಂದು ಫೆಲೆಸ್ತೀನಿ ಮಾಧ್ಯಮಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಸೈನಿಕರು, ವಾಹನಗಳು ಮತ್ತು ಬುಲ್ಡೋಜರ್ಗಳೊಂದಿಗೆ ಹಲವಾರು ಕಡೆಗಳಿಂದ ನಗರಕ್ಕೆ ಮುತ್ತಿಗೆ ಹಾಕಿದ್ದ ಇಸ್ರೇಲಿ ಪಡೆಗಳು ನಿರಂತರ 10 ಗಂಟೆಗಳ ಕಾಲ ದಾಳಿ ನಡೆಸಿವೆ. ಇಬ್ನ್ ಸಿನಾ ಆಸ್ಪತ್ರೆಯನ್ನು ತೆರವುಗೊಳಿಸುವಂತೆ ಅವು ಆಗ್ರಹಿಸಿದ್ದವು. ದಾಳಿಗಳಲ್ಲಿ ಮೂವರು ಫೆಲೆಸ್ತೀನಿಗಳು ಕೊಲ್ಲಲ್ಪಟ್ಟಿದ್ದು, ಕನಿಷ್ಠ ಒಂಭತ್ತು ಜನರು ಗಾಯಗೊಂಡಿದ್ದಾರೆ ಎಂದು ಫೆಲೆಸ್ತೀನಿ ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ.
ಈ ನಡುವೆ ನುಸೈರತ್ ನಿರಾಶ್ರಿತರ ಶಿಬಿರದಲ್ಲಿಯ ಮನೆಯೊಂದರ ಮೇಲೆ ಇಸ್ರೇಲಿ ಬಾಂಬ್ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 18ಕ್ಕೇರಿದೆ. ಕೊಲ್ಲಲ್ಪಟ್ಟವರಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎಂದು ಅಲ್ ಜಝೀರಾ ವರದಿ ಮಾಡಿದೆ.
ಅತ್ತ ಲಾಸ್ ಏಂಜೆಲಿಸ್ ಟೈಮ್ಸ್, ಪಾಶ್ಚಾತ್ಯ ಮಾಧ್ಯಮಗಳಿಂದ ಯುದ್ಧದ ವರದಿಗಾರಿಕೆಯನ್ನು ಟೀಕಿಸಿರುವ ಬಹಿರಂಗ ಪತ್ರಕ್ಕೆ ತನ್ನ ಪತ್ರಕರ್ತರು ಸಹಿ ಮಾಡಿದರೆ ಅವರು ಗಾಝಾದಲ್ಲಿ ಇಸ್ರೇಲ್ ಯುದ್ಧವನ್ನು ವರದಿ ಮಾಡುವುದನ್ನು ಮೂರು ತಿಂಗಳ ಕಾಲ ನಿರ್ಬಂಧಿಸುವ ಕ್ರಮಕ್ಕೆ ಮುಂದಾಗಿದೆ ಎಂದು ಸೆಮಾಫರ್ ವರದಿಯು ತಿಳಿಸಿದೆ.
ಹಲವಾರು ವರದಿಗಾರರನ್ನು ಯುದ್ಧದ ವರದಿಗಾರಿಕೆಯಿಂದ ತೆಗೆಯಲಾಗಿದೆ ಎಂದು ದೃಢಪಡಿಸಿದ ಲಾಸ್ ಏಂಜೆಲಿಸ್ ಟೈಮ್ಸ್ ನ ಪತ್ರಕರ್ತೆ ಸುಹಾನಾ ಹುಸೇನ್, ಇದರಲ್ಲಿ ಹೆಚ್ಚಿನವರು ಮುಸ್ಲಿಮ್ ಮತ್ತು ಫೆಲೆಸ್ತೀನಿ ಮೂಲದ ವರದಿಗಾರರಾಗಿದ್ದಾರೆ ಎಂದು ತಿಳಿಸಿದರು.
ಗಾಝಾದಲ್ಲಿ ಇಸ್ರೇಲಿ ಬಾಂಬ್ ದಾಳಿಯನ್ನು ಖಂಡಿಸಿರುವ ಬಹಿರಂಗ ಪತ್ರಕ್ಕೆ ಲಾಸ್ ಏಂಜೆಲಿಸ್ ಟೈಮ್ಸ್ನ ಸುಮಾರು ಮೂರು ಡಝನ್ ಸಿಬ್ಬಂದಿಗಳು ಸಹಿ ಹಾಕಿದ್ದಾರೆ ಎಂದು ಹುಸೇನ್ ತಿಳಿಸಿದರು.
ಪತ್ರವು ಬಿಡುಗಡೆಗೊಂಡಾಗಿನಿಂದ 1,200ಕ್ಕೂ ಅಧಿಕ ಪತ್ರಕರ್ತರು ಮತ್ತು ಲೇಖಕರು ಅದಕ್ಕೆ ಸಹಿ ಹಾಕಿದ್ದಾರೆ.