ಇರಾನ್ ಮೇಲೆ ಪ್ರತಿದಾಳಿಗೆ ಇಸ್ರೇಲ್ ʼಯುದ್ಧ ಸಂಪುಟʼ ಒಲವು: ಆದರೆ...
twitter.com/MayadeenEnglish
ಗಾಝಾ: ಪಶ್ಚಿಮ ಏಷ್ಯಾದಲ್ಲಿ ಯುದ್ಧಭೀತಿಯ ಹಿನ್ನೆಲೆಯಲ್ಲಿ ರವಿವಾರ ಸಭೆ ಸೇರಿದ್ದ ಇಸ್ರೇಲ್ 'ಯುದ್ಧ ಸಂಪುಟ' ತನ್ನ ಮುಂದಿನ ಹೆಜ್ಜೆ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬರುವಲ್ಲಿ ವಿಫಲವಾಗಿದೆ. ಇದೇ ಮೊಟ್ಟಮೊದಲ ಬಾರಿಗೆ ಇರಾನ್ ತನ್ನ ನೆಲದಿಂದ ಇಸ್ರೇಲ್ ಮೇಲೆ 300ಕ್ಕೂ ಹೆಚ್ಚು ಕ್ಷಿಪಣಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಇಡೀ ವಿಶ್ವ ಯುದ್ಧ ಸಾಧ್ಯತೆಯನ್ನು ತೀವ್ರ ಆತಂಕದಿಂದ ಎದುರು ನೋಡುತ್ತಿದೆ.
ನೂರಾರು ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿರುವ ಇರಾನ್ ವಿರುದ್ಧ ಅಂತಾರಾಷ್ಟ್ರೀಯ ಸೇನಾ ಮೈತ್ರಿಕೂಟದ ಬೆಂಬಲವನ್ನು ಇಸ್ರೇಲ್ ಪಡೆದಿದ್ದು, ಟೆಹ್ರಾನ್ ವಿರುದ್ಧ ಪ್ರಾದೇಶಿಕ ವಿರೋಧಿಗಳ ಪ್ರಮುಖ ಮೈತ್ರಿಕೂಟ ಸಂಯೋಜಿತ ಪ್ರತಿದಾಳಿಗೆ ಕರೆ ನೀಡಿದೆ.
ಅಮೆರಿಕದ ಸೆಂಟ್ರಲ್ ಕಮಾಂಡ್ ಅಥವಾ ಸೆಂಟ್ ಕಾಮ್ ಸೋಮವಾರ ಹೇಳಿಕೆ ನೀಡಿ, ಇಸ್ರೇಲ್ ನೆಲವನ್ನು ಗುರಿಯಾಗಿಸಿದ್ದ ಸುಮಾರು 80 ಸಿಬ್ಬಂದಿ ರಹಿತ ವೈಮಾನಿಕ ವಾಹನಗಳನ್ನು ಅಮೆರಿಕ ಹಾಗೂ ಯೂರೋಪಿಯನ್ ಕಮಾಂಡ್ ಡಿಸ್ಟ್ರಾಯರ್ ಗಳು ಹೊಡೆದು ಉರುಳಿಸಿರುವುದಾಗಿ ಪ್ರಕಟಿಸಿದೆ. ಜತೆಗೆ ಇರಾನ್ ಹಾಗೂ ಯೆಮನ್ ನಿಂದ ಇಸ್ರೇಲ್ ಮೇಲೆ ದಾಳಿ ಮಾಡಲು ಉದ್ದೇಶಿಸಿದ್ದ ಕನಿಷ್ಠ ಆರು ಸಿಡಿತಲೆ ಕ್ಷಿಪಣಿಗಳನ್ನು ನಾಶಪಡಿಸಲಾಗಿದೆ ಎಂದು ಹೇಳಿದೆ.
ಶೇಕಡ 99ರಷ್ಟು ಬ್ಯಾರೇಜ್ ಗಳನ್ನು ಛೇದಿಸಲಾಗಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ. ಇಸ್ರೇಲ್ ನಲ್ಲಿ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಹೇಳಿಕೆ ನೀಡಿರುವ ಇರಾನ್, ತನ್ನ ಉದ್ದೇಶಗಳು ಈಡೇರಿವೆ ಎಂದು ಸ್ಪಷ್ಟಪಡಿಸಿದೆ. ಯುದ್ಧ ಪರಿಸ್ಥಿತಿ ಉಲ್ಬಣಗೊಳ್ಳದಂತೆ ತಾತ್ಕಾಲಿಕವಾಗಿ ದಾಳಿ ನಿಲ್ಲಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ಇಸ್ರೇಲ್ ಮಿತ್ರರಾಷ್ಟ್ರಗಳಾದ ಅಮೆರಿಕ ಹಾಗೂ ಯೂರೋಪ್ ಕೂಡಾ ಸಂಯಮ ಕಾಪಾಡಿಕೊಳ್ಳುವಂತೆ ಕರೆ ನೀಡಿವೆ.