ತಮ್ಮ ಆತ್ಮಕತೆಯ ಪ್ರಕಟಣೆಯನ್ನು ಹಿಂಪಡೆದ ಇಸ್ರೋ ಮುಖ್ಯಸ್ಥ ಸೋಮನಾಥ್
ಇಸ್ರೋ ಮುಖ್ಯಸ್ಥ ಸೋಮನಾಥ್ Photo- PTI
ತಿರುವನಂತಪುರಂ: ತಮ್ಮ ಆತ್ಮಕತೆಯಲ್ಲಿ ತಮ್ಮ ನಿಕಟಪೂರ್ವ ಅಧ್ಯಕ್ಷ ಕೆ. ಶಿವನ್ ವಿರುದ್ಧ ಟೀಕೆಗಳಿವೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಅವರು ತಮ್ಮ ಆತ್ಮಕತೆಯನ್ನು ಪ್ರಕಟಣೆಯಿಂದ ಹಿಂಪಡೆಯುತ್ತಿರುವುದಾಗಿ ಶನಿವಾರ ಪ್ರಕಟಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ವಿವಾದದ ಹಿನ್ನೆಲೆಯಲ್ಲಿ ತಮ್ಮ ಕೃತಿ ‘ನಿಲವು ಕುಡಿಚ ಸಿಂಹಂಗಳ್ (ಸಿಂಹಗಳು ಕುಡಿದ ಚಂದ್ರನ ಬೆಳಕು) ಅನ್ನು ಹಿಂಪಡೆಯವ ನಿರ್ಧಾರ ಕೈಗೊಂಡಿರುವುದಾಗಿ ಸೋಮನಾಥ್ ದೃಢಪಡಿಸಿದ್ದಾರೆ.
ರವಿವಾರ ಬೆಳಗ್ಗೆ PTI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಸೋಮನಾಥ್, ಯಾವುದೇ ಸಂಸ್ಥೆಯ ಉನ್ನತ ಹಂತಕ್ಕೆ ಏರಬೇಕಾದರೆ ಪ್ರತಿಯೊಬ್ಬ ವ್ಯಕ್ತಿಯೂ ಆ ಪಯಣದಲ್ಲಿ ಕೆಲವು ಬಗೆಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ತಮ್ಮ ನಿಕಟಪೂರ್ವ ಅಧ್ಯಕ್ಷ ಶಿವನ್ ಕುರಿತು ತಮ್ಮ ಆತ್ಮಕತೆಯಲ್ಲಿ ಕೆಲವು ಟೀಕೆಗಳಿವೆ ಎಂದು ಪ್ರತಿಪಾದಿಸಿರುವ ವರದಿಯ ಕುರಿತು ಅವರು ಪ್ರತಿಕ್ರಿಯಿಸುತ್ತಿದ್ದರು.
ಚಂದ್ರಯಾನ-2 ಯೋಜನೆಯ ವೈಫಲ್ಯದ ಪ್ರಕಟಣೆಯಲ್ಲಿ ಸ್ಪಷ್ಟತೆಯ ಕೊರತೆಯಿದೆ ಎಂದು ತಮ್ಮ ಕೃತಿಯಲ್ಲಿ ಉಲ್ಲೇಖಿಸಿರುವುದನ್ನು ಅವರು ಒಪ್ಪಿಕೊಂಡಿದ್ದಾರೆ.
ತಮ್ಮ ಜೀವನದಲ್ಲಿ ಸವಾಲುಗಳೊಂದಿಗೆ ಹೋರಾಡಿ ಮತ್ತು ಅಡತಡೆಗಳನ್ನು ಎದುರಿಸಿ ಸಾಧನೆ ಮಾಡಲು ಬಯಸುವ ವ್ಯಕ್ತಿಗಳಿಗೆ ಸ್ಫೂರ್ತಿ ನೀಡುವ ಪ್ರಯತ್ನ ನನ್ನ ಆತ್ಮಕತೆಯಲ್ಲಿದೆಯೇ ಹೊರತು ಯಾರನ್ನೂ ಟೀಕಿಸುವ ಉದ್ದೇಶ ಹೊಂದಿಲ್ಲ ಎಂದು ಇಸ್ರೊ ಅಧ್ಯಕ್ಷ ಸೋಮನಾಥ್ ಪುನರುಚ್ಚರಿಸಿದ್ದಾರೆ.