ಭಯೋತ್ಪಾದನೆ ವಿರುದ್ಧ ಭಾರತ ಒಗ್ಗಟ್ಟಾಗಿ ನಿಲ್ಲುವುದು ಮುಖ್ಯ: ರಾಹುಲ್ ಗಾಂಧಿ

ರಾಹುಲ್ ಗಾಂಧಿ | PTI
ಶ್ರೀನಗರ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿಂದಿನ ಉದ್ದೇಶ ದೇಶದ ಜನರನ್ನು ವಿಭಜಿಸುವುದಾಗಿತ್ತು. ಭಯೋತ್ಪಾದನೆಯನ್ನು ಶಾಶ್ವತವಾಗಿ ಸೋಲಿಸಲು ಭಾರತ ಒಗ್ಗಟ್ಟಿನಿಂದ ಇರುವುದು ಅಗತ್ಯವಾಗಿದೆ ಎಂದು ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.
‘‘ಇದೊಂದು ಭಯಾಕ ದುರಂತ. ಇಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಹಾಗೂ ನೆರವು ನೀಡಲು ನಾನು ಇಲ್ಲಿಗೆ ಬಂದಿದ್ದೇನೆ. ಜಮ್ಮು ಹಾಗೂ ಕಾಶ್ಮೀರದ ಎಲ್ಲಾ ಜನರು ಈ ಭಯಾನಕ ಕೃತ್ಯವನ್ನು ಖಂಡಿಸಿದ್ದಾರೆ. ಅವರು ದೇಶವನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಾರೆ’’ ಎಂದು ರಾಹುಲ್ ಗಾಂಧಿ ಶ್ರೀನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಶ್ರೀನಗರಕ್ಕೆ ಶುಕ್ರವಾರ ಬೆಳಗ್ಗೆ ಆಗಮಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಘಟನೆಯಲ್ಲಿ ಗಾಯಗೊಂಡವರ ಯೋಗಕ್ಷೇಮ ವಿಚಾರಿಸಲು ಬಾದಾಮಿಬಾಗ್ ಕಂಟೋನ್ಮೆಂಟ್ನಲ್ಲಿರುವ ಸೇನೆಯ 92 ಬೇಸ್ ಆಸ್ಪತ್ರೆಗೆ ಭೇಟಿ ನೀಡಿದರು.
‘‘ನಾನು ಗಾಯಗೊಂಡವರಲ್ಲಿ ಓರ್ವನನ್ನು ಮಾತ್ರ ಭೇಟಿಯಾದೆ. ಇತರರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಯಾಕೆಂದರೆ, ಅವರೆಲ್ಲ ಮನೆಗೆ ಹಿಂದಿರುಗಿದ್ದಾರೆ. ಕುಟುಂಬದ ಸದಸ್ಯರನ್ನು ಕಳೆದುಕೊಂಡ ಪ್ರತಿಯೊಬ್ಬರಿಗೂ ನನ್ನ ಪ್ರೀತಿ ಹಾಗೂ ವಾತ್ಸಲ್ಯ ಇರುತ್ತದೆ. ಇಡೀ ರಾಷ್ಟ್ರ ಒಂದಾಗಿ ನಿಂತಿದೆ ಎಂದು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ನಾನು ಬಯಸುತ್ತೇನೆ ’’ ಎಂದು ಅವರು ಹೇಳಿದರು.
ದಿಲ್ಲಿಯಲ್ಲಿ ಗುರುವಾರ ನಡೆದ ಸರ್ವ ಪಕ್ಷಗಳ ಸಭೆಯನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ಭಯೋತ್ಪಾದಕ ದಾಳಿಯನ್ನು ಪ್ರತಿಪಕ್ಷ ಖಂಡಿಸುತ್ತದೆ ಹಾಗೂ ಸರಕಾರದ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಪ್ರತಿಪಾದಿಸಿದರು.
‘‘ಈ ಘಟನೆಯ ಹಿಂದಿರುವ ಉದ್ದೇಶ ಸಮಾಜವನ್ನು ವಿಭಜಿಸುವುದು, ಸಹೋದರರು ಸಹೋದರೊಂದಿಗೆ ಹೋರಾಡುವಂತೆ ಮಾಡುವುದಾಗಿದೆ. ಪ್ರತಿಯೊಬ್ಬ ಭಾರತೀಯನೂ ಸಂಘಟಿತವಾಗಿ ಹಾಗೂ ಒಟ್ಟಾಗಿ ನಿಲ್ಲುವುದು ಮುಖ್ಯವಾಗಿದೆ. ಆಗ ನಾವು ಭಯೋತ್ಪಾದಕರ ಕೃತ್ಯಕ್ಕೆ ಸೋಲುಂಟು ಮಾಡಬಹುದು’’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ರಾಹುಲ್ ಗಾಂಧಿ ಅವರು ಜಮು ಹಾಗೂ ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹಾಗೂ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರನ್ನು ಭೇಟಿಯಾದರು.