ಸಿಎಎ ಜಾರಿ ತಡೆಯಲು ಯಾರಿಗೂ ಅಸಾಧ್ಯ : ಮೋದಿ
ನರೇಂದ್ರ ಮೋದಿ | PC : PTI
ಉತ್ತರ 24 ಪರಗಣ (ಪಶ್ಚಿಮ ಬಂಗಾಳ) : ಮಮತಾ ಬ್ಯಾನರ್ಜಿ ಆಳ್ವಿಕೆಯಲ್ಲಿ ನುಸುಳುಕೋರರು ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ರವಿವಾರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೊಳಿಸುವುದನ್ನು ಯಾರಿಗೂ ತಡೆಯಲು ಸಾಧ್ಯವಿಲ್ಲವೆಂದು ಅವರು ಹೇಳಿದ್ದಾರೆ.
ಬರಾಕ್ಪುರದಲ್ಲಿ ಬಿಜೆಪಿಯ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಳದ ಜನತೆಗೆ ಐದು ‘ಗ್ಯಾರಂಟಿ’ಗಳನ್ನು ನೀಡುವುದಾಗಿ ಹೇಳಿದರು.
‘‘ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಲು ಯಾರಿಗೂ ಬಿಡುವುದಿಲ್ಲ. ಎಸ್ಸಿ, ಎಸ್ಟಿ ಹಾಗೂ ಒಬಿಸಿ ಮೀಸಲಾತಿಯನ್ನು ಮುಟ್ಟಲು ಬಿಡುವುದಿಲ್ಲ. ನೀವು ರಾಮನವಮಿ ಆಚರಿಸುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ರಾಮಮಂದಿರ ಕುರಿತ ಸುಪ್ರೀಂಕೋರ್ಟ್ ತೀರ್ಪನ್ನು ರದ್ದುಪಡಿಸಲು ಬಿಡುವುದಿಲ್ಲ, ಸಿಎಎ ಜಾರಿಯನ್ನು ನಿಲ್ಲಿಸಲು ಯಾರಿಗೂ ಅವಕಾಶ ನೀಡುವುದಿಲ್ಲ’’ ಎಂದು ಮೋದಿ ತಿಳಿಸಿದ್ದಾರೆ.
ಪ್ರತಿಪಕ್ಷಗಳು ಸಿಎಎ ಅನ್ನು ಒಂದು ಖಳನಾಯಕನೆಂಬಂತೆ ಬಿಂಬಿಸುತ್ತಿದೆ. ಸಿಎಎ ಎಂದರೆ ಪೌರತ್ವವನ್ನು ಒದಗಿಸುವುದಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಸಿಎಎ ಎಂಬುದು ಮಾನವೀಯತೆಯನ್ನು ರಕ್ಷಿಸುವ ಕಾನೂನಾಗಿದ್ದು, ‘ವೋಟ್ ಬ್ಯಾಂಕ್ ರಾಜಕೀಯವು ಅದನ್ನು ಖಳನಂತೆ ಬಿಂಬಿಸಿದೆ. ಸಿಎಎ ಸಂತ್ರಸ್ತರಿಗೆ ಪೌರತ್ವವನ್ನು ನೀಡುವ ಕಾನೂನಾಗಿದೆ. ಯಾರ ಪೌರತ್ವವನ್ನೂ ಅದು ಕಸಿದುಕೊಳ್ಳುವುದಿಲ್ಲ. ಆದರೆ ಕಾಂಗ್ರೆಸ್-ಟಿಎಂಸಿಯಂತಹ ಪಕ್ಷಗಳು ಅದಕ್ಕೆ ಸುಳ್ಳುಗಳ ಬಣ್ಣಗಳನ್ನು ಬಳಿದಿದೆʼ ಎಂದು ಹೇಳಿದರು.
‘‘ಬಂಗಾಳದಲ್ಲಿ ಹಲವಾರು ವೈಜ್ಞಾನಿಕ ಸಂಶೋಧನೆಗಳು ನಡೆದ ಕಾಲವಿತ್ತು. ಆದರೆ ಇಂದು ಟಿಎಂಸಿಯ ಆಳ್ವಿಕೆಯಲ್ಲಿ ರಾಜ್ಯದ ಹಲವು ಸ್ಥಳಗಳಲ್ಲಿ ಬಾಂಬ್ ತಯಾರಿಕೆಯು ಒಂದು ಗುಡಿ ಕೈಗಾರಿಕೆಯಾಗಿಬಿಟ್ಟಿದೆ. ನುಸುಳುಕೋರರ ವಿರುದ್ಧ ಬಂಗಾಳವು ಬಂಡಾಯವೆದ್ದ ಕಾಲವೊಂದಿತ್ತು. ಆದರೆ ಇಂದು ಟಿಎಂಸಿ ರಕ್ಷಣೆಯಲ್ಲಿ ನುಸುಳುಕೋರರು ಬೆಳೆಯುತ್ತಿದ್ದಾರೆ’’ ಎಂದು ಅವರು ಹೇಳಿದರು.