"ಇಲ್ಲಿ ಹಸಿವಿನಲ್ಲಿ ಇರುವುದಕ್ಕಿಂತ ಉತ್ತಮ": ಯುದ್ಧಪೀಡಿತ ಇಸ್ರೇಲ್ನಲ್ಲಿ ಉದ್ಯೋಗಗಳಿಗಾಗಿ ಮುಗಿಬಿದ್ದ ಭಾರತೀಯರು
ಸಾಂದರ್ಭಿಕ ಚಿತ್ರ (AP/PTI)
ಲಕ್ನೋ: ಹಮಾಸ್ ಜೊತೆ ಯುದ್ಧದಲ್ಲಿ ತೊಡಗಿರುವ ಇಸ್ರೇಲ್ನಲ್ಲಿ ಉದ್ಯೋಗಗಳಿಗಾಗಿ ಮುಗಿಬಿದ್ದಿರುವ ಭಾರತೀಯರು,ಇಲ್ಲಿ ಹಸಿವಿನಿಂದ ಒದ್ದಾಡಿ ಸಾಯುವುದಕ್ಕಿಂತ ಅಲ್ಲಿ ತಮ್ಮ ಸುರಕ್ಷತೆಗೆ ಅಪಾಯವನ್ನು ಎದುರು ಹಾಕಿಕೊಳ್ಳುವುದೇ ಮೇಲು ಎಂದು ಹೇಳಿದ್ದಾರೆ ಎಂದು AFP ವರದಿ ಮಾಡಿದೆ.
ಕಳೆದ ನಾಲ್ಕು ತಿಂಗಳುಗಳಿಂದ ಗಾಝಾದಲ್ಲಿ ಹಮಾಸ್ ಹೋರಾಟಗಾರರೊಂದಿಗೆ ನಡೆಯುತ್ತಿರುವ ಯುದ್ಧದಿಂದಾಗಿ ಇಸ್ರೇಲ್ನಲ್ಲಿ ಉಲ್ಬಣಗೊಂಡಿರುವ ಕಾರ್ಮಿಕರ ಕೊರತೆಯನ್ನು ನೀಗಿಸುವುದು ನೇಮಕಾತಿದಾರರ ಉದ್ದೇಶವಾಗಿದೆ.
ಇಸ್ರೇಲ್ನಲ್ಲಿ ಉದ್ಯೋಗಕ್ಕಾಗಿ ಕಾದು ನಿಂತಿರುವ ನೂರಾರು ಭಾರತೀಯರಿಗೆ ಅಲ್ಲಿ ನುರಿತ ನಿರ್ಮಾಣ ಉದ್ಯೋಗದ ಅವಕಾಶ ಮತ್ತು ಇಲ್ಲಿಗಿಂತ 18 ಪಟ್ಟು ಹೆಚ್ಚು ಸಂಬಳ ಪಡೆಯುವ ಹಂಬಲವು ಅವರ ಎಲ್ಲ ಭೀತಿಗಳನ್ನು ಮೀರಿಸಿದೆ.
"ನಮ್ಮ ಹಣೆಯಲ್ಲಿ ಸಾಯುವುದು ಬರೆದಿದ್ದರೆ ನಾವು ಅಲ್ಲಿಯೇ ಸಾಯುತ್ತೇವೆ. ಕನಿಷ್ಠ ನಮ್ಮ ಮಕ್ಕಳಿಗಾದರೂ ಏನಾದರೂ ಸಿಗತ್ತದೆ" ಎಂದ ಲಕ್ನೋದಲ್ಲಿಯ ಕಿಕ್ಕಿರಿದು ತುಂಬಿದ್ದ ತರಬೇತಿ ಮತ್ತು ಭರ್ತಿ ಕೇಂದ್ರದಲ್ಲಿ ತನ್ನ ಸರದಿಗಾಗಿ ಕಾದುನಿಂತಿದ್ದ ಬೈಕ್ ಮೆಕ್ಯಾನಿಕ್ ಜಬ್ಬರ್ ಸಿಂಗ್ ಹೇಳಿದರು. ಇಲ್ಲಿ ಹಸಿವಿನಿಂದ ಒದ್ದಾಡುವುದಕ್ಕಿಂತ ಅದು ಒಳ್ಳೆಯದು ಎಂದರು.
"ಇಲ್ಲಿ ನಾಲ್ಕು ದಿನ ಕೆಲಸ, ಆದರೆ ಊಟ ಮಾತ್ರ ಎರಡೇ ದಿನ" ಎಂದು ಟೈಲ್ ಡಿಸೈನರ್ ದೀಪಕ್ ಕುಮಾರ್ ಹೇಳಿದರು.
"ನಾನು ಗಾಝಾ ಯುದ್ಧದ ಸುದ್ದಿಗಳನ್ನು ಓದಿದ್ದೇನೆ ಮತ್ತು ಅಲ್ಲಿ ಎದುರಾಗಬಹುದಾದ ಅಪಾಯಗಳೂ ನನಗೆ ತಿಳಿದಿವೆ. ಆದರೂ ಇಸ್ರೇಲ್ನಲ್ಲಿ ಕೆಲಸವನ್ನು ಕಂಡುಕೊಳ್ಳಲು ಬಯಸಿದ್ದೇನೆ. ನಾನು ನಗುನಗುತ್ತಲೇ ಗುಂಡಿಗೆ ಎದೆಯೊಡ್ಡುತ್ತೇನೆ, ಆದರೆ 1.50 ಲಕ್ಷ ರೂ.(1,800 ಡಾ.)ಗಳ ವೇತನವನ್ನು ಪಡೆಯುತ್ತೇನೆ" ಎಂದು ದೀಪಕ್ ಕುಮಾರ್ ಹೇಳಿದರು.
ಇಸ್ರೇಲ್ನಲ್ಲಿ ಪ್ರಸ್ತುತ ಸುಮಾರು 18,000 ಭಾರತೀಯರಿದ್ದಾರೆ. ಹೆಚ್ಚಿನವರು ವಯಸ್ಸಾದ ವ್ಯಕ್ತಿಗಳ ಆರೈಕೆದಾರರಾಗಿ ಕೆಲಸ ಮಾಡುತ್ತಿದ್ದಾರೆ, ಇತರರು ವಜ್ರ ವ್ಯಾಪಾರಿಗಳು ಮತ್ತು ಐಟಿ ವೃತ್ತಿಪರರಾಗಿದ್ದಾರೆ. ಕೆಲವರು ವಿದ್ಯಾರ್ಥಿಗಳಾಗಿದ್ದಾರೆ.
ಆದರೆ ನೇಮಕಾತಿದಾರರು ಉದ್ಯೋಗಾಕಾಂಕ್ಷಿಗಳಿಗಾಗಿ ಹೊಸ ಅಭಿಯಾನವನ್ನು ಆರಂಭಿಸಿದ್ದಾರೆ.
"ಮಾಸಿಕ 1,685 ಡಾಲರ್ ವೇತನ ಗಳಿಸುವ ಅವಕಾಶವಿರುವ 10,000 ನುರಿತ ಕಟ್ಟಡ ಕಾರ್ಮಿಕರನ್ನು ನೇಮಿಸಿಕೊಳ್ಳಲು ಇಸ್ರೇಲ್ನ ನೇಮಕಾತಿದಾರರು ಉದ್ದೇಶಿಸಿದ್ದು, ನಾವು ಅವರಿಗೆ ನೆರವಾಗುತ್ತಿದ್ದೇವೆ. ಅವರು ಕಾರ್ಮಿಕರಿಗೆ ವೀಸಾಗಳನ್ನು ನೀಡಲಿದ್ದಾರೆ ಮತ್ತು ಚಾರ್ಟರ್ಡ್ ವಿಮಾನದಲ್ಲಿ ಅವರನ್ನು ಇಸ್ರೇಲಿಗೆ ಕರೆದೊಯ್ಯಲಿದ್ದಾರೆ. ಇದರಿಂದಾಗಿ 10,000 ಕುಟುಂಬಗಳು ನೆಮ್ಮದಿಯಿಂದ ಊಟ ಮಾಡಲಿವೆ ಮತ್ತು ಪ್ರಗತಿ ಹೊಂದಲಿವೆ" ಎಂದು ಲಕ್ನೋದ ಕೈಗಾರಿಕಾ ತರಬೇತಿ ಸಂಸ್ಥೆಯ ಮುಖ್ಯಸ್ಥ ರಾಜಕುಮಾರ ಯಾದವ ಹೇಳಿದರು.
ಈ ಕಾರ್ಯಕ್ರಮವು ಉಭಯ ದೇಶಗಳ ಅಧಿಕಾರಿಗಳ ಬೆಂಬಲವನ್ನು ಪಡೆದಿದೆ ಎಂದರು.
ಅ.7ರಂದು ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ಆರಂಭಗೊಂಡ ಬಳಿಕ ಕೊಲ್ಲಲ್ಪಟ್ಟವರಲ್ಲಿ ಥೈಲ್ಯಾಂಡ್ ಮತ್ತು ನೇಪಾಳ ಮೂಲದ ಕೃಷಿ ಕಾರ್ಮಿಕರು ಸೇರಿದ್ದಾರೆ. ಕೆಲವರು ಈಗಲೂ ಹಮಾಸ್ ನ ಒತ್ತೆಸೆರೆಯಲ್ಲಿದ್ದಾರೆ.
ಇದು ವಿದೇಶಿ ಕಾರ್ಮಿಕರಲ್ಲಿ ಭೀತಿಯನ್ನು ಹುಟ್ಟುಹಾಕಿದೆ. ಅವರಲ್ಲಿ ಹೆಚ್ಚಿನವರು ಸ್ವದೇಶಗಳಿಗೆ ವಾಪಸಾಗಿದ್ದಾರೆ. ಹೀಗಾಗಿ ಇಸ್ರೇಲ್ನ ಕೃಷಿ ಕ್ಷೇತ್ರದಲ್ಲಿಯೂ ಕಾರ್ಮಿಕರ ತೀವ್ರ ಕೊರತೆ ಎದುರಾಗಿದೆ. ಅಲ್ಲದೆ ಆಕ್ರಮಿತ ಗಾಝಾ ದಂಡೆಯಲ್ಲಿ ಫೆಲೆಸ್ತೀನಿಗಳಿಂದ 1,30,000 ವರ್ಕ್ ಪರ್ಮಿಟ್ಗಳನ್ನೂ ಇಸ್ರೇಲ್ ಹಿಂದೆಗೆದುಕೊಂಡಿದೆ.
ಈ ಕೊರತೆಯನ್ನು ನೀಗಿಸಲು ಭಾರತೀಯ ಕಾರ್ಮಿಕರು ಮಾರ್ಗವಾಗಲಿದ್ದಾರೆ.
ತನಗೆ ಯಾವುದೇ ಆಯ್ಕೆ ಉಳಿದಿಲ್ಲ ಎಂದು ಹೇಳಿದ ಎರಡು ಮಕ್ಕಳ ತಂದೆ ಕೇಶವ ದಾಸ್, ‘"ಇಲ್ಲಿ ಯಾವುದೇ ಕೆಲಸವಿಲ್ಲ, ಹೀಗಾಗಿ ಎಲ್ಲಿಯಾದರೂ ನಾನು ಕೆಲಸ ಮಾಡಲೇಬೇಕು. ನಾನು ಅಪಾಯದ ವಲಯಕ್ಕೆ ತೆರಳುತ್ತಿದ್ದೇನೆ ಎನ್ನುವುದು ನನಗೆ ಗೊತ್ತು. ಆದರೆ ನನಗೆ ನನ್ನ ಕುಟುಂಬದ ತುತ್ತಿನ ಚೀಲಗಳನ್ನು ತುಂಬಿಸಬೇಕಿದೆ, ಹೀಗಾಗಿ ನಾನು ಹೊರಗೆ ಹೋಗಲೇಬೇಕು. ಇಲ್ಲದಿದ್ದರೆ ನನ್ನ ಮಕ್ಕಳು ಹಸಿವಿನಿಂದ ಸಾಯುತ್ತಾರೆ" ಎಂದರು.