ಜಾಧವಪುರ ವಿವಿ ವಿದ್ಯಾರ್ಥಿ ಸಾವಿನ ಪ್ರಕರಣ: ಇನ್ನೂ ಆರು ಮಂದಿಯ ಬಂಧನ
ಸ್ವಪನ್ದೀಪ್ ಸಿಂಗ್ ಕುಂಡೂ (Photo: indiatoday.in), ಜಾದವಪುರ ವಿಶ್ವವಿದ್ಯಾನಿಲ (Photo: PTI)
ಕೋಲ್ಕತಾ: ಕಳೆದ ವಾರ ಜಾದವಪುರ ವಿಶ್ವವಿದ್ಯಾನಿಲಯದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಕೋಲ್ಕತಾ ಪೊಲೀಸರು ಇನ್ನೂ ಆರು ಮಂದಿಯನ್ನು ಬಂಧಿಸಿದ್ದಾರೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ 9ಕ್ಕೇರಿದೆ.
ಬಂಗಾಳಿ (ಹಾನರ್ಸ್) ಪದವಿ ವಿದ್ಯಾರ್ಥಿ ಸ್ವಪನ್ದೀಪ್ ಕುಂಡು (18) ಆಗಸ್ಟ್ 9ರಂದು ತನ್ನ ಹಾಸ್ಟೆಲ್ ಕಟ್ಟಡದ ಬಾಲ್ಕನಿಯ ಎರಡನೆ ಅಂತಸ್ತಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರೆನ್ನಲಾಗಿದೆ.
ಸ್ವಪನ್ದೀಪ್ ನ ಸಾವಿನ ಪ್ರಕರಣದಲ್ಲಿ ಬಂಧಿತರಾದ ಕೆಲವು ಶಂಕಿತರು ವಿವಿಯ ಹಳೆ ವಿದ್ಯಾರ್ಥಿಗಳಾಗಿದ್ದರೆ, ಇನ್ನು ಕೆಲವರು ಹಾಲಿ ವಿದ್ಯಾರ್ಥಿಗಳು.
ತೃತೀಯ ವರ್ಷದ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಮೊಹಮ್ಮದ್ ಆರೀಫ್, ನಾಲ್ಕನೇ ವರ್ಷದ ಇಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಆಸೀಫ್ ಆಝ್ಮಲ್, ತೃತೀಯ ವರ್ಷದ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಅಂಕನ್ ಸರ್ಕಾರ್, ಪರಿಸರ ವಿಜ್ಞಾನದ ಹಳೆ ವಿದ್ಯಾರ್ಥಿ ಸಪ್ತಕ್ ಕಾಮಿಲ್ಯಾ, ಸಂಸ್ಕೃತ ವಿಭಾಗದ ಹಳೆ ವಿದ್ಯಾರ್ಥಿ ಅಸಿತ್ ಸರ್ದಾರ್ ಹಾಗೂ ಸುಮನ್ ನಾಸ್ಕರ್ ಬಂಧಿತ ಆರೋಪಿಗಳು.
ಬಂಧಿತರಾದ ಆರು ಮಂದಿಯ ಪೈಕಿ ಇಬ್ಬರು ಕೋಲ್ಕತಾದಿಂದ ಪರಾರಿಯಾಗಿದ್ದರು. ಅವರ ಪತ್ತೆಗೆ ಜಾಲ ಬೀಸಿದ ಪೊಲೀಸ್ ಪತ್ತೆದಾರಿ ದಳದ ಅಧಿಕಾರಿಗಳು ಸೋಮವಾರ ರಾತ್ರಿಯಿಡೀ ಶೋಧ ಕಾರ್ಯಾಚರಣೆ ನಡೆಸಿದ್ದರು. ಅವರನ್ನು ಇಂದು ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಬಂಧಿಸಲಾಗಿದೆಯೆಂದು ಕೋಲ್ಕತಾ ಪೊಲೀಸರು ತಿಳಿಸಿದ್ದಾರೆ.
ಪ್ರಥಮ ವರ್ಷದ ಪದವಿ ವಿದ್ಯಾರ್ಥಿಯಾದ ಸ್ವಪ್ನೇಂದು ಕುಂಡೂ ಸಾವಿನ ಪ್ರಕರಣದಲ್ಲಿ ಶಾಮೀಲಾದ ಆರೋಪದಲ್ಲಿ ಇಬ್ಬರು ಹಾಲಿ ವಿದ್ಯಾರ್ಥಿಗಳಾದ ಮನ್ತೋಷ್ ಘೋಷ್ ಹಾಗೂ ದೀಪಶೇಖರ್ ದತ್ತಾ ಹಾಗೂ ಇನ್ನೋರ್ವ ಹಳೆ ವಿದ್ಯಾರ್ಥಿ ಸೌರವ್ ಚೌಧುರಿಯನ್ನು ಬಂಧಿಸಿದ್ದರು.
ನಾಡಿಯಾ ಜಿಲ್ಲೆಯ ಬಗುಲಾದ ನಿವಾಸಿಯಾದ ಸ್ವಪ್ನೋದೀಪ್ ಕುಂಡು ಆಗಸ್ಟ್ 9ರಂದು ರಾತ್ರಿ 11:45ರ ವೇಳೆಗೆ ಹಾಸ್ಟೆಲ್ನ ಮುಖ್ಯ ಕಟ್ಟಡ ಎರಡನೆ ಅಂತಸ್ತಿನಿದ ಬಿದ್ದು ಸಾವನ್ನಪ್ಪಿದ್ದರು.