ನೂಹ್ ನಲ್ಲಿ ಜಲಾಭಿಷೇಕ ಯಾತ್ರೆಗೆ ಅನುಮತಿ ಇಲ್ಲ: ಹರ್ಯಾಣ ಡಿಜಿಪಿ
28ರಂದು ಯಾತ್ರೆ ನಡೆಸುವುದಾಗಿ ಸಂಘಪರಿವಾರದ ಸಂಘಟನೆಗಳ ಘೋಷಣೆ ► ನೂಹ್ ನಲ್ಲಿ ಭದ್ರತಾ ಕಟ್ಟೆಚ್ಚರ, ಇಂಟರ್ನೆಟ್ ಸಂಪರ್ಕ ಕಡಿತ, ಸೆ.144 ಜಾರಿ
Shatrujeet Kapoor | Photo: twitter \ @profwasim
ಹೊಸದಿಲ್ಲಿ: ಕೆಲವು ವಾರಗಳ ಹಿಂದೆ ಭೀಕರ ಹಿಂಸಾಚಾರಕ್ಕೆ ಸಾಕ್ಷಿಯಾದ ಹರ್ಯಾಣದ ನೂಹ್ ನಲ್ಲಿ ಸೋಮವಾರ ಜಲಾಭಿಷೇಕ ಯಾತ್ರೆಯನ್ನು ನಡೆಸಲು ಕರೆ ನೀಡಿರುವಂತೆಯೇ, ಪೊಲೀಸ್ ಆಯುಕ್ತ ಶತ್ರುಜೀತ್ ಕಪೂರ್ ಅವರು ಮೆರವಣಿಗೆಗೆ ಅನುಮತಿ ನಿರಾಕರಿಸಲಾಗಿದೆಯೆಂದು ಶನಿವಾರ ತಿಳಿಸಿದ್ದಾರೆ. ಜಲಾಭಿಷೇಕ ಯಾತ್ರೆಯಲ್ಲಿ ಪಾಲ್ಗೊಳ್ಳಲು ನೆರೆಹೊರೆಯ ರಾಜ್ಯಗಳಿಂದ ನೂಹ್ ಗೆ ಆಗಮಿಸುವಂತೆ ಸಂಘಟಕರು ಕರೆ ನೀಡಿರುವ ಹಿನ್ನೆಲೆಯಲ್ಲಿ ಕಾನೂನು, ಸುವ್ಯವಸ್ಥೆ ಕಾಪಾಡಲು ಅಗತ್ಯವಿರುವ ಎಲ್ಲಾ ರೀತಿಯ ಭದ್ರತಾ ಏರ್ಪಾಡುಗಳನ್ನು ಮಾಡಲಾಗಿದೆಯೆಂದು ಅವರು ತಿಳಿಸಿದರು.
ಪಂಚಕುಲದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹರ್ಯಾಣದ ಗಡಿರಾಜ್ಯಗಳ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಸಮನ್ವಯದಿಂದ ಕಾರ್ಯಾಚರಿಸಬೇಕೆಂದು ಮನವಿ ನೀಡಿದರು.
ಆಗಸ್ಟ್ 28ರಂದು ಜಲಾಭಿಷೇಕ ಯಾತ್ರೆಗೆ ಸಂಘಪರಿವಾರದ ಸಂಘಟನೆಗಳು ಕರೆ ನೀಡಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ನೂಹ್ ನಲ್ಲಿ ಆಗಸ್ಟ್ 26ರ ಮಧ್ಯಾಹ್ನ 12:00 ಗಂಟೆಯಿಂದ ಆಗಸ್ಟ್ 28ರ ಮಧ್ಯರಾತ್ರಿವರೆಗೆ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಹೇರಲಾಗಿದ್ದು, ಐದು ಅಥವಾ ಅಧಿಕ ಮಂದಿ ಸಭೆ ಸೇರುವುದನ್ನು ನಿಷೇಧಿಸಲಾಗಿದೆ.
ಪಂಜಾಬ್, ದಿಲ್ಲಿ, ಉತ್ತರಪ್ರದೇಶ, ರಾಜಸ್ಥಾನ ಹಾಗೂ ಕೇಂದ್ರಾಡಳಿತ ಚಂಡೀಗಢದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಹರ್ಯಾಣದ ನೂಹ್ ಜಿಲ್ಲೆಯಲ್ಲಿ ಸೆಪ್ಟೆಂಬರ್ 3ರಿಂದ 7ರವರೆಗೆ ಜಿ20 ಶೃಂಗಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಜಲಾಭಿಷೇಕ ಯಾತ್ರೆಗೆ ನೂಹ್ ಆಡಳಿತವು ಅನುಮತಿ ನಿರಾಕರಿಸಿದೆಯೆಂದು ಅವರು ಹೇಳಿದರು.
ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಗುಪ್ತಚರ ಮಾಹಿತಿಗಳನ್ನು ಹಂಚಿಕೊಳ್ಳುವ ಅಗತ್ಯವನ್ನು ಒತ್ತಿಹೇಳಿದ ಕಪೂರ್ ಅವರು ವಿವಿಧ ರಾಜ್ಯಗಳ ಪೊಲೀಸ್ ಅಧಿಕಾರಿಗಳು ನಿರಂತರವಾಗಿ ಸಾಮಾಜಿಕ ಮಾಧ್ಯಮಗಳ ವೇದಿಕೆಗಳ ಮೇಲೆ ಕಣ್ಗಾವಲಿರಿಸಬೇಕು. ದ್ವೇಷಭಾಷಣಗಳ ಮೂಲಕ ಶಾಂತಿಯನ್ನು ಕದಡಲು ಯತ್ನಿಸುತ್ತಿರುವವರ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುವಂತೆ ಹಾಗೂ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿಳಿಸಿದರು.ಜನರು ಯಾವುದೇ ರೀತಿಯಲ್ಲಿ ಜಮಾವಣೆಗೊಳ್ಳುವುದನ್ನು ತಡೆಯಲು ಅಂತಾರಾಜ್ಯ ಗಡಿಗಳಲ್ಲಿ ತಡೆಬೇಲಿಗಳ ನಿರ್ಮಾಣಕ್ಕೆ ಅವರು ಸಲಹೆ ನೀಡಿದರು. ಕಾನೂನನ್ನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲವೆಂದು ಅವರು ಹೇಳಿದರು.
ನೂಹ್ ನಲ್ಲಿ ಕಾನೂನು, ಸುವ್ಯವಸ್ಥೆಯ ಪಾಲನೆಗೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮಮತಾ ಸಿಂಗ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ಕೋಮುಸೌಹಾರ್ದವನ್ನು ಕದಡುವಂತಹ ಯಾವುದೇ ಘಟನೆ ವರದಿಯಾದಲ್ಲಿ ಅವುಗಳನ್ನು ಗಡಿರಾಜ್ಯಗಳ ಪೊಲೀಸ್ ಅಧಿಕಾರಿಗಳು ತಕ್ಷಣವೇ ಹಂಚಿಕೊಳ್ಳುವಂತೆಯೂ ಅವರು ಸೂಚಿಸಿದರು.
ಈ ಮಧ್ಯೆ 52 ಖಾಪ್ ಪಂಚಾಯತ್ ಗಳ ಅಧ್ಯಕ್ಷರಾದ ಅರುಣ್ ಜೈಲ್ದಾರ್ ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಸರ್ವ ಹಿಂದೂ ಸಮಾಜವು ನೂಹ್ನಲ್ಲಿ ಧಾರ್ಮಿಕ ಮೆರವಣಿಗೆ ನಡಸಲಿದೆ ಹಾಗೂ ಜಿ-20 ಶೃಂಗಸಭೆ ಹಾಗೂ ಗಲಭೆಕೋರರ ವಿರುದ್ಧ ಪೊಲೀಸರ್ ಕಾನೂನು ಕ್ರಮ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಲಾಭಿಷೇಕ ಮೆರವಣಿಗೆಯ ಗಾತ್ರ ಮತ್ತಿತರ ಅಂಶಗಳ ಬಗ್ಗೆ ಚರ್ಚಿಸಲು ಸಿದ್ಧವಿರುವುದಾಗಿ ಹೇಳಿದ್ದಾರೆ.
ನೂಹ್ ನ ಹಿಂದೂಗಳು ಹಾಗೂ ಜಿಲ್ಲೆಯ ಹೊರಭಾಗದಲ್ಲಿರುವ ಭಕ್ತಾದಿಗಳ ಒತ್ತಾಸೆಯ ಮೇರೆಗೆ ಜಲಾಭಿಷೇಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಹಾಗೂ ಜಿಲ್ಲೆಯ ಹೊರಗಿನ ಭಕ್ತಾದಿಗಳನ್ನು ಆಹ್ವಾನಿಸಲಾಗುವುದಿಲ್ಲವೆಂದು ವಿಶ್ವಹಿಂದೂ ಪರಿಷತ್ ಪ್ರಧಾನ ಕಾರ್ಯದರ್ಶಿ ಸುರೇಂದ್ರಜೈನ್ ಸ್ಪಷ್ಟಪಡಿಸಿದ್ದಾರೆ.