ಶಿವ ದೇಗುಲ ಎಂದು ಹೇಳಿಕೊಂಡು ಬಲಪಂಥಿಯರಿಂದ ಜಲಾಭಿಷೇಕ: ತಾಜ್ ಮಹಲ್ನ ಮುಖ್ಯ ಪ್ರದೇಶಕ್ಕೆ ಸಂದರ್ಶಕರು ನೀರಿನ ಬಾಟಲಿ ಒಯ್ಯುವುದಕ್ಕೆ ನಿಷೇಧ
ತಾಜ್ ಮಹಲ್
ಹೊಸದಿಲ್ಲಿ: ಆಗ್ರಾದಲ್ಲಿರುವ ತಾಜ್ ಮಹಲ್ನ ಮುಖ್ಯ ಪ್ರದೇಶಕ್ಕೆ ತೆರಳುವ ಸಂದರ್ಶಕರು ನೀರಿನ ಬಾಟಲಿಗಳನ್ನು ತಮ್ಮೊಂದಿಗೆ ಒಯ್ಯುವುದಕ್ಕೆ ಭಾರತದ ಪುರಾತತ್ವ ಸರ್ವೇಕ್ಷಣಾ ಇಲಾಖೆ ನಿಷೇಧ ಹೇರಿದೆ. ಬಲಪಂಥಿಯ ಗುಂಪುಗಳ ಕೆಲವರು ಬಾಟಲಿ ನೀರು ಇಟ್ಟುಕೊಂಡು ಅಲ್ಲಿ ಜಲಾಭಿಷೇಕ ನಡೆಸುವ ಹಲವು ಘಟನೆಗಳ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ತಾಜ್ ಮಹಲ್ನ ಚಮೇಲಿ ಫರ್ಶ್ನಿಂದ ಮುಖ್ಯ ಗೋಪುರ ಪ್ರದೇಶದ ತನಕ ನೀರಿನ ಬಾಟಲಿಯನ್ನು ಯಾರೂ ಒಯ್ಯುವಂತಿಲ್ಲ.
ಕಳೆದ ಶನಿವಾರ ಅಲ್ಲಿ ಗಂಗಾ ಜಲಾಭಿಷೇಕ ನಡೆಸಿದ್ದ ಅಖಿಲ ಭಾರತ ಹಿಂದು ಮಹಾಸಭಾದ ಇಬ್ಬರು ಸದಸ್ಯರನ್ನು ಬಂಧಿಸಲಾಗಿತ್ತು. ಈ ಸ್ಮಾರಕವು ಮೊದಲು ಶಿವ ದೇಗುಲವಾಗಿತ್ತೆಂದು ಅವರು ಹೇಳಿಕೊಂಡು ಜಲಾಭಿಷೇಕ ನಡೆಸಿದ್ದರು.
ಇದರ ಹೊರತಾಗಿ ಶ್ರಾವಣ ಮಾಸದ ಮೂರನೇ ಸೋಮವಾರದಂದು ಮಹಾಸಭಾದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮೀರಾ ರಾಥೋರ್ ಇಲ್ಲಿ ಜಲಾಭಿಷೇಕ ನಡೆಸಿ ಈ ಯುನೆಸ್ಕೋ ವಿಶ್ವ ಪಾರಂಪರಿಕ ತಾಣದಲ್ಲಿ ಕೇಸರಿ ಧ್ವಜ ಹಾರಿಸಿದ್ದರು.
ನೀರಿನ ಬಾಟಲಿಗೆ ನಿಷೇಧವನ್ನು ಕೆಲವರು ಟೀಕಿಸಿದ್ದಾರೆ. ಬೇಸಿಗೆಯ ಸಮಯದಲ್ಲಿ ನೀರಿಲ್ಲದೆ ಪ್ರವಾಸಿಗರಿಗೆ ತಾಜ್ ಮಹಲ್ ಒಳಗೆ ಇರುವುದು ಕಷ್ಟಕರ. ಸುರಕ್ಷತಾ ಕ್ರಮಕೈಗೊಂಡು ಎಚ್ಚರಿಕೆ ವಹಿಸುವ ಬದಲು ಸಂಬಂಧಿತ ಪ್ರಾಧಿಕಾರಗಳು ನೀರಿನ ಬಾಟಲಿಗಳಿಗೆ ನಿಷೇಧ ಹೇರಿವೆ ಎಂದು ಟೂರಿಸ್ಟ್ ಗೈಡ್ಸ್ ಕಲ್ಯಾಣ ಸಂಘದ ಅಧ್ಯಕ್ಷ ದೀಪಕ್ ಜೈನ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರವಾಸಿಗರಿಗೆ ಯಾವುದೇ ಸಮಸ್ಯೆಯಾಗದು ಅಲ್ಲಿರುವ ಸಿಬ್ಬಂದಿ ಅಗತ್ಯವಿರುವವರಿಗೆ ಸಣ್ಣ ನೀರಿನ ಬಾಟಲಿ ಒದಗಿಸುತ್ತಾರೆ ಎಂದು ಎಎಸ್ಐ ಅಧಿಕಾರಿ ರಾಜ್ಕುಮಾರ್ ಪಟೇಲ್ ಹೇಳಿದ್ದಾರೆ.