ಎನ್ಸಿ, ಪಿಡಿಪಿ, ಕಾಂಗ್ರೆಸ್ ಜಮ್ಮುಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿದೆ : ಚುನಾವಣಾ ಪ್ರಚಾರ ಸಭೆಯಲ್ಲಿ ನರೇಂದ್ರ ಮೋದಿ ಆರೋಪ
ನರೇಂದ್ರ ಮೋದಿ | PTI
ಶ್ರೀನಗರ : ತಮ್ಮ ರಾಜಕೀಯ ಪ್ರಭಾವವನ್ನು ಉಳಿಸಿಕೊಳ್ಳಲು ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ), ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ (ಪಿಡಿಪಿ) ಹಾಗೂ ಕಾಂಗ್ರೆಸ್ ಕಳೆದ 7 ದಶಕಗಳಿಂದ ಜಮ್ಮು ಹಾಗೂ ಕಾಶ್ಮೀರದಲ್ಲಿ ಪ್ರತ್ಯೇಕತಾವಾದ ಹಾಗೂ ಭಯೋತ್ಪಾದನೆಗೆ ಪ್ರೋತ್ಸಾಹಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಜಮ್ಮು ಹಾಗೂ ಕಾಶ್ಮೀರ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ದೋಡಾದಲ್ಲಿ ನಡೆದ ಮೊದಲ ಬೃಹತ್ ರ್ಯಾ ಲಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜಮ್ಮು ಹಾಗೂ ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಅಂತ್ಯ ಕಾಲ ಸಮೀಪಿಸಿದೆ. ಮುಂದಿನ ಚುನಾವಣೆ ಕೇಂದ್ರಾಡಳಿತ ಪ್ರದೇಶದ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ಅವರು ಹೇಳಿದರು.
ರಂಬಾನ್ನಿಂದ ಕಿಸ್ತ್ವಾರದ ವರೆಗೆ ನಡೆದ ರ್ಯಾ ಲಿಯಲ್ಲಿ ಪಾಲ್ಗೊಂಡ ಬಿಜೆಪಿ ಕಾರ್ಯಕರ್ತರನ್ನು ಪ್ರಶಂಸಿದ ಅವರು, ‘‘ನಿಮ್ಮ ಉತ್ಸಾಹವನ್ನು ನಾನು ನಿಜವಾಗಿ ಶ್ಲಾಘಿಸುತ್ತೇನೆ’’ ಎಂದರು. ‘‘ಸ್ವಾತಂತ್ರ್ಯದ ಬಳಿಕ ವಿದೇಶಿ ಶಕ್ತಿಗಳು ಜಮ್ಮು ಹಾಗೂ ಕಾಶ್ಮೀರವನ್ನು ಗುರಿಯಾಗಿ ಇರಿಸಿಕೊಂಡಿವೆ. ಈ ಪ್ರದೇಶದ ವಿರುದ್ಧ ಪಿತೂರಿ ನಡೆಸಿವೆ. ಕುಟುಂಬ ರಾಜಕಾರಣ ಈ ಪ್ರದೇಶದ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ’’ ಎಂದು ಅವರು ಹೇಳಿದರು.
2000ದ ಬಳಿಕ ಪಂಚಾಯತ್ ಚುನಾವಣೆಯನ್ನು ನಡೆಸದ ಎನ್ಸಿ, ಪಿಡಿಪಿ ಹಾಗೂ ಕಾಂಗ್ರೆಸ್ ಅನ್ನು ಅವರು ತರಾಟೆಗೆ ತೆಗೆದುಕೊಂಡರು. ‘‘ತಳಮಟ್ಟದಲ್ಲಿ ಪ್ರಜಾಪ್ರಭುತ್ವವನ್ನು ತಂದಿರುವುದು ಬಿಜೆಪಿ ಸರಕಾರ’’ ಎಂದು ಅವರು ಹೇಳಿದರು. ‘‘ಬ್ಲಾಕ್ ಅಭಿವೃದ್ಧಿ ಕೌನ್ಸಿಲ್ ಹಾಗೂ ಜಿಲ್ಲಾ ಅಭಿವೃದ್ಧಿ ಕೌನ್ಸಿಲ್ನ ಚುನಾವಣೆ ಮೊದಲ ಬಾರಿಗೆ ಬಿಜೆಪಿ ಆಡಳಿತದಲ್ಲಿ ನಡೆಯಿತು’’ ಎಂದು ಅವರು ತಿಳಿಸಿದರು.
ಮುಂದಿನ ಚುನಾವಣೆಯನ್ನು ಮೂರು ರಾಜಕೀಯ ಕುಟುಂಬಗಳು ಹಾಗೂ ತಮ್ಮ ಕನಸುಗಳನ್ನು ಬೆನ್ನಟ್ಟುವ ಯುವ ಜನತೆಯ ನಡುವಿನ ಸ್ಪರ್ಧೆ ಎಂದು ಅವರು ವ್ಯಾಖ್ಯಾನಿಸಿದರು. ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದ ಯುವ ಜನತೆ ಇಂದು ಅತಿ ದೊಡ್ಡ ಗುರಿಯನ್ನು ಹೊಂದಿದ್ದಾರೆ ಎಂದು ಅವರು ಹೇಳಿದರು. ‘‘ಕಲ್ಲುಗಳನ್ನು ಈಗ ದೊಡ್ಡ ಕಟ್ಟಡಗಳನ್ನು ನಿರ್ಮಿಸಲು ಬಳಸಲಾಗುತ್ತಿದೆ’’ ಎಂದು ಅವರು ಮಾರ್ಮಿಕವಾಗಿ ನುಡಿದರು.
ಭಯೋತ್ಪಾದಕರ ದಾಳಿಗೆ ತಂದೆ ತಾಯಿಯನ್ನು ಕಳೆದುಕೊಂಡ ಕಿಸ್ತ್ವಾರದ ಬಿಜೆಪಿ ಅಭ್ಯರ್ಥಿ ಶಗುನ್ ಪರಿಹಾರ್ ಅವರನ್ನು ಮೋದಿ ಶ್ಲಾಘಿಸಿದರು. ‘‘ಈ ಚುನಾವಣೆಯಲ್ಲಿ ಸ್ಪರ್ಧಿಸಲು ನಾವು ಅವರಿಗೆ ಟಿಕೆಟ್ ನೀಡಿದೆವು. ಅವರು ಭಯೋತ್ಪಾದನೆ ವಿರುದ್ಧದ ನಮ್ಮ ಆಯುಧ’’ ಎಂದು ಅವರು ಹೇಳಿದರು.
ಜಮ್ಮು ಹಾಗೂ ಕಾಶ್ಮೀರದ ರಾಜ್ಯದ ಸ್ಥಾನಮಾನವನ್ನು ಮರು ಸ್ಥಾಪಿಸಲು, ಅದನ್ನು ಭಯೋತ್ಪಾದನೆ ಮುಕ್ತ ಪ್ರದೇಶವಾಗಿಸಲು ಹಾಗೂ ಪ್ರವಾಸಿಗರ ಸ್ವರ್ಗವನ್ನಾಗಿ ಮಾಡಲು ಬಿಜೆಪಿ ಬದ್ಧವಾಗಿದೆ ಎಂದು ನರೇಂದ್ರ ಮೋದಿ ಹೇಳಿದರು.