ಜಮ್ಮು ಮತ್ತು ಕಾಶ್ಮೀರದ ಜನತೆ ಕಾಂಗ್ರೆಸ್-ಎನ್ಸಿ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ನೀಡಿದ್ದಾರೆ : ಜೈರಾಮ್ ರಮೇಶ್
ಜೈರಾಮ್ ರಮೇಶ್ | PC : X \ @INCIndia
ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಜನತೆ ಕಾಂಗ್ರೆಸ್-ಎನ್ಸಿ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ನೀಡಿದ್ದು, ರಾಜ್ಯ ಸ್ಥಾನಮಾನದ ಬೇಡಿಕೆಯನ್ನು ಪೂರೈಸುವುದು ನಮ್ಮ ಮೊದಲ ಆದ್ಯತೆ ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, “ಬಹುಮತ ಪಡೆಯಲು ಬಿಜೆಪಿ ನಡೆಸಿದ್ದ ಕುತಂತ್ರಗಳನ್ನು ಜಮ್ಮು ಮತ್ತು ಕಾಶ್ಮೀರದ ಜನತೆ ಮಣಿಸಿದ್ದಾರೆ. ಅಂತಹ ಪ್ರಯತ್ನಗಳನ್ನು ನಿನ್ನೆಯವರೆಗೂ ಮಾಡಲಾಗಿತ್ತು. ಆದರೆ, ಇಂದು ಜನರ ತೀರ್ಪು ಹೊರಬಂದಿದೆ. ಬಿಜೆಪಿಯ ನಡೆಗಳು ಹಾಗೂ ಚುನಾವಣೆಗಳನ್ನು ನಿರ್ವಹಿಸುತ್ತಿದ್ದವರನ್ನು ಜನರು ಪರಾಭವಗೊಳಿಸಿದ್ದಾರೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಹರ್ಯಾಣ ಹಾಗೂ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಗಳ ಫಲಿತಾಂಶ ಇಂದು ಪ್ರಕಟವಾಗಿದ್ದು, ಹರ್ಯಾಣದಲ್ಲಿ ಬಿಜೆಪಿಯು ಸತತ ಮೂರನೆಯ ಬಾರಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್-ಎನ್ಸಿ ಮೈತ್ರಿಕೂಟ ಸ್ಪಷ್ಟ ಬಹುಮತ ಗಳಿಸಿದೆ.