ಜಮ್ಮುಕಾಶ್ಮೀರಕ್ಕೆ ಕೂಡಲೇ ರಾಜ್ಯದ ಸ್ಥಾನಮಾನ ನೀಡಬೇಕು : ಚಿದಂಬರಂ
ಪಿ. ಚಿದಂಬರಂ | PC : PTI
ಶ್ರೀನಗರ : ಜಮ್ಮು ಹಾಗೂ ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಕೂಡಲೇ ಮರು ಸ್ಥಾಪಿಸುವುದು ಅತ್ಯಗತ್ಯ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಪಿ. ಚಿದಂಬರಂ ಗುರುವಾರ ಹೇಳಿದ್ದಾರೆ.
ಜಮ್ಮು ಹಾಗೂ ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಭದ್ರತಾ ಪರಿಶೀಲನಾ ಸಭೆ ನಡೆಸಿದ ದಿನದ ಬಳಿಕ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜನರು ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿದ್ದಾರೆ. ಅವರ ಭದ್ರತೆಯನ್ನು ನೋಡಿಕೊಳ್ಳಬೇಕಿರುವುದು ಮುಖ್ಯಮಂತ್ರಿ ಹೊಣೆ. ಆದರೆ, ಮುಖ್ಯಮಂತ್ರಿಗೆ ಯಾವುದೇ ಅಧಿಕಾರವಿಲ್ಲ. ಆದುದರಿಂದ ಜಮ್ಮು ಹಾಗೂ ಕಾಶ್ಮೀರಕ್ಕೆ ಕೂಡಲೇ ಸಂಪೂರ್ಣ ರಾಜ್ಯದ ಸ್ಥಾನಮಾನ ನೀಡುವುದು ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.
‘ಎಕ್ಸ್’ನ ಪೋಸ್ಟ್ನಲ್ಲಿ ಚಿದಂಬರಂ, ಜಮ್ಮು ಹಾಗೂ ಕಾಶ್ಮೀರದ ಕಾನೂನು ಸುವ್ಯವಸ್ಥೆಯ ಕುರಿತ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ನೇತೃತ್ವದಲ್ಲಿ ನಡೆದ ಸಭೆಯ ಫೋಟೊಗಳು ಏನು ಹೇಳುತ್ತವೆ," ಎಂದು ಪ್ರಶ್ನಿಸಿದ್ದಾರೆ.
‘‘ಚುನಾಯಿತ ಮುಖ್ಯಮಂತ್ರಿ ಪಾಲ್ಗೊಂಡಿಲ್ಲ. ಅವರನ್ನು ಆಹ್ವಾನಿಸಿದ್ದಾರೋ ಇಲ್ಲವೋ ನನಗೆ ತಿಳಿದಿಲ್ಲ. ಜಮ್ಮು ಹಾಗೂ ಕಾಶ್ಮೀರಕ್ಕೆ ಅನ್ವಯವಾಗುವ ಕಾನೂನಿನ ಅಡಿಯಲ್ಲಿ ಪೊಲೀಸ್, ಕಾನೂನು ಹಾಗೂ ಸುವ್ಯವಸ್ಥೆ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಮೀಸಲಾಗಿದೆ’’ ಎಂದು ಅವರು ಹೇಳಿದ್ದಾರೆ.
ಶ್ರೀನಗರದ ರಾಜಭವನದಲ್ಲಿ ಬುಧವಾರ ನಡೆಸಿದ ಸಭೆಯಲ್ಲಿ ಸಿನ್ಹಾ ಅವರು ಮೂಲಭೂತ ಸೌರ್ಕಯದ ಯೋಜನೆಗಳ ಭದ್ರತಾ ಪರಿಶೀಲನೆ, ಕಣಿವೆಯ ವ್ಯೆಹಾತ್ಮಕ ಕೇಂದ್ರಗಳಲ್ಲಿ 24 ಗಂಟೆಗಳ ಕಾಲ ಗಸ್ತು ನಡೆಸುವಂತೆ ಸೂಚಿಸಿದ್ದರು.