ಜಮ್ಮು-ಕಾಶ್ಮೀರ : ಶಂಕಿತ ಉಗ್ರರೊಂದಿಗೆ ಗುಂಡಿನ ಕಾಳಗ
ಸೇನಾಧಿಕಾರಿ ಮೃತ್ಯು, ಮೂವರು ಯೋಧರಿಗೆ ಗಾಯ
ಸಾಂದರ್ಭಿಕ ಚಿತ್ರ | PC ; PTI
ಜಮ್ಮು: ಜಮ್ಮು ಹಾಗೂ ಕಾಶ್ಮೀರದ ಕಿಸ್ತ್ವಾರ್ ಜಿಲ್ಲೆಯ ದುರ್ಗಮ ಅರಣ್ಯ ಪ್ರದೇಶದಲ್ಲಿ ರವಿವಾರ ಶಂಕಿತ ಉಗ್ರರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಸೇನೆಯ ವಿಶೇಷ ಪಡೆಗಳ ಜೂನಿಯರ್ ಕಮಿಷನ್ಡ್ ಆಫೀಸರ್ (ಜೆಸಿಒ) ಸಾವನ್ನಪ್ಪಿದ್ದಾರೆ. ಅಲ್ಲದೆ, ಮೂವರು ಯೋಧರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಗ್ರಾಮ ರಕ್ಷಣಾ ದಳ (ವಿಡಿಜಿ)ದ ಇಬ್ಬರು ಸ್ವಯಂಸೇವಕರು ಹತ್ಯೆಯಾದ ಬಳಿಕ ಗುರುವಾರ ಸಂಜೆಯಿಂದ ಕುಂತವಾರಾ ಮತ್ತು ಕೇಶಾವನ್ ಅರಣ್ಯಗಳಲ್ಲಿ ಅಡಗಿರುವ ಉಗ್ರರಿಗಾಗಿ ತೀವ್ರ ಶೋಧದ ನಡುವೆ ಈ ಕಾರ್ಯಾಚರಣೆ ನಡೆದಿದೆ.
ಮೃತಪಟ್ಟ ಜೂನಿಯರ್ ಕಮಿಷನ್ಡ್ ಆಫೀಸರ್ರನ್ನು 2 ಪಾರಾದ ನಾಯಬ್ ಸುಬೇದಾರ್ ರಾಕೇಶ್ ಕುಮಾರ್ ಎಂದು ಸೇನೆ ಗುರುತಿಸಿದ್ದು, ಅವರ ಅತ್ಯುನ್ನತ ತ್ಯಾಗಕ್ಕೆ ಗೌರವ ಸಲ್ಲಿಸಿದೆ.
ಗ್ರಾಮ ರಕ್ಷಣಾ ದಳದ ಸ್ವಯಂ ಸೇವಕರಾದ ನಝೀರ್ ಅಹ್ಮದ್ ಹಾಗೂ ಕುಲ್ದೀಪ್ ಕುಮಾರ್ ಅವರ ಗುಂಡಿನಿಂದ ಜರ್ಜರಿತಗೊಂಡಿದ್ದ ಮೃತದೇಹ ಪತ್ತೆಯಾದ ಸ್ಥಳದಿಂದ ಕೆಲವು ಕಿ.ಮೀ. ದೂರದಲ್ಲಿರುವ ಕೇಶಾವನ್ ಅರಣ್ಯದಲ್ಲಿ ಸೇನೆ ಹಾಗೂ ಪೊಲೀಸ್ನ ಜಂಟಿ ಶೋಧನಾ ತಂಡ ರವಿವಾರ ಬೆಳಗ್ಗೆ ಸುಮಾರು 11 ಗಂಟೆಗೆ ಅಡಗಿದ್ದ ಶಂಕಿತ ಉಗ್ರರೊಂದಿಗೆ ಮುಖಾಮುಖಿಯಾದ ಸಂದರ್ಭ ಗುಂಡಿನ ಕಾಳಗ ನಡೆಯಿತು ಎಂದು ಸೇನೆ ತಿಳಿಸಿದೆ.
‘‘ಉಗ್ರರ ಇರುವಿಕೆ ಕುರಿತು ನಿರ್ದಿಷ್ಟ ಬೇಹುಗಾರಿಕೆ ಮಾಹಿತಿಯ ಆಧಾರದಲ್ಲಿ ಭದ್ರತಾ ಪಡೆಗಳು ಕಿಸ್ತ್ವಾರದ ಭಾರತ್ ರಿಜ್ನ
ಸಾಮಾನ್ಯ ಪ್ರದೇಶದಲ್ಲಿ ಜಂಟಿ ಶೋಧ ಕಾರ್ಯಾಚರಣೆ ಆರಂಭಿಸಿತು. ಇದೇ ಗುಂಪು ಅಮಾಯಕ ಗ್ರಾಮಸ್ಥರನ್ನು (ಗ್ರಾಮ ರಕ್ಷಣಾ ದಳ)ಅಪಹರಿಸಿ, ಹತ್ಯೆಗೈದಿತ್ತು. ಆದುದರಿಂದ ಶೋಧ ಕಾರ್ಯಾಚರಣೆ ನಡೆಸಲಾಯಿತು’’ ಎಂದು ಸೇನೆಯ ಜಮ್ಮು ಮೂಲದ ವೈಟ್ ನೈಟ್ ಕಾರ್ಪ್ಸ್ ತನ್ನ ‘ಎಕ್ಸ್’ ಪೋಸ್ಟ್ನಲ್ಲಿ ಹೇಳಿದೆ.
ಆರಂಭಿಕ ಗುಂಡಿನ ಕಾಳಗದಲ್ಲಿ ಜೆಸಿಒ ಸೇರಿದಂತೆ ನಾಲ್ವರು ಸೇನಾ ಸಿಬ್ಬಂದಿ ಗಾಯಗೊಂಡರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿತ್ತು. ನಂತರ ಜಿಸಿಒ ಮೃತಪಟ್ಟರು ಎಂದು ಅಧಿಕಾರಿ ತಿಳಿಸಿದ್ದಾರೆ.
ಕೆಚ್ಚೆದೆಯಿಂದ ಹೋರಾಡಿ ಪ್ರಾಣ ತ್ಯಾಗ ಮಾಡಿದ 2 ಪಾರಾದ ನಾಯಬ್ ಸುಬೇದಾರ್ ರಾಕೇಶ್ ಕುಮಾರ್ ಅವರಿಗೆ ಜಿಒಸಿ (ಜನರಲ್ ಆಫೀಸರ್ ಕಮಾಂಡಿಗ್) ವೈಟ್ ನೈಟ್ ಕಾರ್ಪ್ಸ್ ಹಾಗೂ ಎಲ್ಲಾ ಶ್ರೇಣಿಗಳ ಸಿಬ್ಬಂದಿ ಗೌರವ ಸಲ್ಲಿಸಿದ್ದಾರೆ. ಸುಬೇದಾರ್ ರಾಕೇಶ್ ಅವರು ಕಿಸ್ತ್ವಾರದ ಭಾರತ್ ರಿಜ್ನಲ್ಲಿ ಆರಂಭಿಸಲಾದ ಉಗ್ರ ವಿರೋಧಿ ಜಂಟಿ ಕಾರ್ಯಾಚರಣೆಯ ಭಾಗವಾಗಿದ್ದರು. ಅವರ ಕುಟುಂಬಕ್ಕೆ ನಾವು ಸಂತಾಪ ವ್ಯಕ್ತಪಡಿಸುತ್ತೇವೆ ಎಂದು ಸೇನೆಯ ಟ್ವೀಟ್ ಹೇಳಿದೆ.