ಜಮ್ಮುಕಾಶ್ಮೀರ ಚುನಾವಣಾ ವೇಳಾಪಟ್ಟಿ ಮುಂದಿನ ವಾರ ಘೋಷಣೆ?
ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ನಾಲ್ಕೈದು ಹಂತಗಳಲ್ಲಿ ಮತದಾನ ಸಾಧ್ಯತೆ
ಸಾಂದರ್ಭಿಕ ಚಿತ್ರ | PTI
ಹೊಸದಿಲ್ಲಿ : ಕೇಂದ್ರಾಡಳಿತ ಜಮ್ಮುಕಾಶ್ಮೀರ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಮುಂದಿನ ವಾರ ಪ್ರಕಟಿಸುವ ನಿರೀಕ್ಷೆಯಿದೆ. ಸೆಪ್ಟೆಂಬರ್ನಿಂದ ಆಕ್ಟೋಬರ್ ತಿಂಗಳವರೆಗೆ ವಿವಿಧ ಹಂತಗಳಲ್ಲಿ ಮತದಾನ ನಡೆಯುವ ನಿರೀಕ್ಷೆಯಿದೆ
ಜಮ್ಮು ಕಾಶ್ಮೀರದ ಮತದಾರರ ಪಟ್ಟಿಯ ಅಂತಿಮ ಪ್ರಕಟಣೆಗೆ ಆಗಸ್ಟ್ 20 ಅಂತಿಮ ದಿನಾಂಕವಾಗಿದೆ. ಜಮ್ಮಕಾಶ್ಮೀರ ವಿಧಾನಸಭೆಗೆ ನಾಲ್ಕರಿಂದ ಐದು ಹಂತಗಳಲ್ಲಿ ಮತದಾನ ನಡೆಯಲಿದೆ. ಸೆಪ್ಟೆಂಬರ್ ತಿಂಗಳ ಮೂರನೇ ವಾರದಲ್ಲಿ ಮೊದಲ ಹಂತದ ಮತದಾನ ನಡೆಯಲಿದ್ದು, ಅಕ್ಟೋಬರ್ನಲ್ಲಿ ಅಂತಿಮ ಹಂತದ ಮತದಾನ ನಡೆಯಲಿದೆ ಎಂದು ವರದಿ ತಿಳಿಸಿದೆ.
ಆಗಸ್ಟ್ 19ರಂದು ಅಮರನಾಥ ಯಾತ್ರೆ ಸಮಾರೋಪಗೊಳ್ಳಲಿದ್ದು, ಯಾತ್ರೆಯ ಸುರಕ್ಷತಾ ಕಾರ್ಯಗಳಿಗಾಗಿ ನಿಯೋಜಿತರಾಗಿದ್ದ ಭದ್ರತಾಪಡೆಗಳನ್ನು ಚುನಾವಣಾ ಕಾರ್ಯಗಳಿಗೂ ಬಳಸಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ. ಉತ್ತರ ಕಾಶ್ಮೀರದಲ್ಲಿ ಅಕ್ಟೋಬರ್ ವೇಳೆಗೆ ಹಿಮ ಬೀಳಲು ಆರಂಭವಾಗಲಿರುವುದರಿಂದ, ಆರಂಭಿಕ ಹಂತಗಳ ಮತದಾನವನ್ನು ಅಲ್ಲಿ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಜಮ್ಮುಕಾಶ್ಮೀರದಲ್ಲಿ ಚುನಾವಣೆ ನಡೆಸಲು ಸುಪ್ರೀಂಕೋರ್ಟ್ ಸೆಪ್ಟೆಂಬರ್ 30ರ ಗಡುವು ವಿಧಿಸಿದೆ. ಈ ಹಿನ್ನೆಲೆಯಲ್ಲಿ ಅಲ್ಲಿ ಚುನಾವಣೆಗಳನ್ನು ನಡೆಸಲು ಚುನಾವಣಾ ಆಯೋಗವು ಬದ್ಧತೆಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ. ಜಮ್ಮಕಾಶ್ಮೀರದ ಭದ್ರತಾ ಪರಿಸ್ಥಿತಿಯ ಕುರಿತು ಅಂತಿಮ ಪರಿಶೀಲನೆಯನ್ನು ಭಾರತೀಯ ಚುನಾವಣಾ ಆಯೋಗ ಹಾಗೂ ಕೇಂದ್ರ ಸರಕಾರವು ಈ ವಾರ ನಡೆಸುವ ನಿರೀಕ್ಷೆಯಿದೆ.
ಸುಮಾರು ಒಂದು ದಶಕದ ಬಳಿಕ ಜಮ್ಮು ಕಾಶ್ಮೀರದ ಜನತೆ ವಿಧಾನಸಭಾ ಚುನಾವಣೆಗೆ ಮತದಾನ ಮಾಡಲಿದ್ದಾರೆ. ಕಳೆದ ವಾರ ಬಾರತೀಯ ಚನಾವಣಾ ಆಯೋಗದ ತಂಡವೊಂದು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.
ಜಮ್ಮುಕಾಶ್ಮೀರದ ಚುನಾವಣೆಗಳು ಪೂರ್ಣಗೊಂಡ ಬಳಿಕ ಅಲ್ಲಿ ನಿಯೋಜಿತರಾದ ಕೇಂದ್ರೀಯ ಪಡೆಗಳು ಬಿಡುವು ದೊರೆಯಲಿರುವುದರಿಂದ ಆನಂತರ ಹರ್ಯಾಣ ಹಾಗೂ ಮಹಾರಾಷ್ಟ್ರ ವಿಧಾನಸಭೆಗಳಿಗೆ ಒಂದೇ ಹಂತದ ಚುನಾವಣೆ ನಡೆಯುವ ಸಾಧ್ಯತೆಯಿದೆ. ಜಾರ್ಖಂಡ್ ರಾಜ್ಯದ ವಿಧಾನಸಭಾ ಚುನಾವಣೆ ನವೆಂಬರ್-ಡಿಸೆಂಬರ್ನಲ್ಲಿ ವಿವಿಧ ಹಂತಗಳಲ್ಲಿ ನಡೆಯುವ ನಿರೀಕ್ಷೆಯಿದೆ ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
2019ರಲ್ಲಿ ಕೇಂದ್ರ ಸರಕಾರವು ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿತ್ತು. ಜಮ್ಮಕಾಶ್ಮೀರದಿಂದ ಲಡಾಕ್ ಅನ್ನು ಪ್ರತ್ಯೇಕಿಸಿ ಇವೆರಡನ್ನೂ ಕೇಂದ್ರಾಡಳಿತ ಪ್ರದೇಶಗಳೆಂದು ಘೋಷಿಸಿತ್ತು. ಆದರೆ ಈ ಪೈಕಿ ಲಡಾಕ್ ಗೆ ವಿಧಾನಸಭೆಯನ್ನು ಹೊಂದಿರದ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾವನ್ನು ನೀಡಲಾಗಿದೆ.