ಜಮ್ಮಕಾಶ್ಮೀರ | ಗುಂಡಿನ ಕಾಳಗ ಭೂಗತ ಪಾತಕಿ ಬಲಿ, ಪೊಲೀಸ್ ಅಧಿಕಾರಿ ಸಾವು
ಶ್ರೀನಗರ : ಜಮ್ಮು ಹಾಗೂ ಕಾಶ್ಮೀರದ ಕಥುವಾದಲ್ಲಿರುವ ಸರಕಾರಿ ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಪೊಲೀಸರು ನಡೆಸಿದ ಎನ್ಕೌಂಟರ್ನಲ್ಲಿ ಭೂಗತ ಪಾತಕಿಯೋರ್ವ ಹತನಾಗಿದ್ದಾನೆ. ಈ ಘಟನೆಯಲ್ಲಿ ಗಂಭೀರ ಗಾಯಗೊಂಡ ಓರ್ವ ಪೊಲೀಸ್ ಅಧಿಕಾರಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಮಂಗಳವಾರ ಸಂಜೆ ಭೂಗತಪಾತಕಿಗಳೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಸಬ್ ಇನ್ಸ್ಪೆಕ್ಟರ್ ದೀಪಕ್ ಶರ್ಮಾ ಅವರು ಗಂಭೀರ ಗಾಯಗೊಂಡರು. ವಿಶೇಷ ಪೊಲೀಸ್ ಅಧಿಕಾರಿಯೊಬ್ಬರು ಗಾಯಗೊಂಡರು ಎಂದು ಅವರು ತಿಳಿಸಿದ್ದಾರೆ.
ಶುನೂ ಗ್ರೂಪ್ ಎಂದು ಕುಖ್ಯಾತವಾಗಿರುವ ಗ್ಯಾಂಗ್ನ ಸದಸ್ಯರು ವಾಸುದೇವ್ ಎಂಬವನ ನೇತೃತ್ವದಲ್ಲಿ ಪೊಲೀಸ್ ತಂಡವನ್ನು ಅಟ್ಟಿಸಿಕೊಂಡು ಹೋಯಿತು. ಭೂಗತಪಾತಕಿಗಳು ತಮ್ಮ ಕಾರನ್ನು ಚಲಾಯಿಸಿಕೊಂಡು ವೈದ್ಯಕೀಯ ಕಾಲೇಜು ಕ್ಯಾಂಪಸ್ಗೆ ನುಗ್ಗಿದರು. ಅಲ್ಲಿ ಅವರನ್ನು ಪೊಲೀಸರು ಸುತ್ತುವರಿದಿದರು.
ಇದರಿಂದ ಅಲ್ಲಿ ಗುಂಡಿನ ಕಾಳಗ ನಡೆಯಿತು. ಈ ಗುಂಡಿನ ಕಾಳಗದಲ್ಲಿ ಪೊಲೀಸರು ಭೂಗತಪಾತಕಿಯೋರ್ವನನ್ನು ಹತ್ಯೆಗೈದರು. ಈ ಗುಂಡಿನ ಕಾಳಗದಲ್ಲಿ ಸಬ್ ಇನ್ಸ್ಪೆಕ್ಟರ್ ಶರ್ಮಾ ಅವರು ಗಂಭೀರ ಗಾಯಗೊಂಡರು. ಅವರಿಗೆ ಕಥುವಾದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಅನಂತರ ಪಂಜಾಬಿನ ಪಠಾಣ್ಕೋಟ್ ಗೆ ಸ್ಥಳಾಂತರಿಸಲಾಯಿತು. ಅವರು ಇಂದು ಬೆಳಗ್ಗೆ ಮೃತಪಟ್ಟರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೆಫ್ಟೆನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಮೃತಪಟ್ಟ ಅಧಿಕಾರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.