ಜಮ್ಮುಕಾಶ್ಮೀರ: ಘೋಷಣೆ ಕೂಗುವಂತೆ ಗ್ರಾಮಸ್ಥರಿಗೆ ಬಲವಂತಪಡಿಸಿದ ಭದ್ರತಾಪಡೆ ಅಧಿಕಾರಿಯ ವರ್ಗಾವಣೆ
ಸಾಂದರ್ಭಿಕ ಚಿತ್ರ \ Photo: PTI
ಶ್ರೀನಗರ: ಜಮ್ಮುಕಾಶ್ಮೀರದಲ್ಲಿ ಗಸ್ತುತಂಡವೊಂದು ಜೈಶ್ರೀರಾಮ್ ಎಂದು ಘೋಷಣೆ ಕೂಗುವಂತೆ ಮುಸ್ಲಿಂ ಗ್ರಾಮಸ್ಥರನ್ನು ಬಲವಂತಪಡಿಸಿದ ಆರೋಪದ ಹಿನ್ನೆಲೆಯಲ್ಲಿ ಭದ್ರತಾಪಡೆಗಳ ಅಧಿಕಾರಿಯೊಬ್ಬರನ್ನು ಕರ್ತವ್ಯದಿಂದ ಮುಕ್ತಿಗೊಳಿಸಿ ವರ್ಗಾವಣೆಗೊಳಿಸಲಾಗಿದೆ.
ಪುಲ್ವಾಮಾ ಜಿಲ್ಲೆಯ ಝದೂರಾ ಗ್ರಾಮದಲ್ಲಿ ಈ ಘಟನೆ ನಡೆದಿರುವುದಾಗಿ ಆರೋಪಿಸಲಾಗಿದೆ.
ಭದ್ರತಾಪಡೆಗಳ ವಿರುದ್ಧದ ಈ ಆರೋಪದ ಬಗ್ಗೆ ತನಿಖೆನಡೆಸುವಂತೆ ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಗುಲಾಂ ನಬಿ ಆಝಾದ್, ಉಮರ್ ಅಬ್ದುಲ್ಲಾ ಹಾಗೂ ಮೆಹಬೂಬಾ ಮುಫ್ತಿ ಸೇರಿದಂದೆ ಹಲವಾರು ಪ್ರಮುಖ ನಾಯಕರು ಆಗ್ರಹಿಸಿದ್ದಾರೆ.
ಜೈಶ್ರೀರಾಮ್ ಘೋಷಣೆ ಕೂಗುವಂತೆ ತಮ್ಮನ್ನು ಬಲವಂತಪಡಿಸುವ ಮುನ್ನ ಈ ಯೋಧರು ತಮಗೆ ಥಳಿಸಿರುವುದಾಗಿ ಹಲವಾರು ಗ್ರಾಮಸ್ಥರು ಆಪಾದಿಸಿದ್ದಾರೆ. ಶನಿವಾರ ಮುಂಜಾನೆ ಝುದೂರಾ ಗ್ರಾಮದ ಮಸೀದಿಯಿಂದ ಪ್ರಾರ್ಥನೆಗೆ ಮುಝೆರಿನ್ ಅವರು ಕರೆ ನೀಡುತ್ತಿದ್ದಾಗ ಈ ಘಟನೆ ಸಂಭವಿಸಿರುವುದಾಗಿ ಅವರು ಹೇಳಿದ್ದಾರೆ. ಗಸ್ತು ತಂಡವೊಂದನ್ನು ಮುನ್ನಡೆಸುತ್ತಿದ್ದ ಭದ್ರತಾ ಅಧಿಕಾರಿಯೊಬ್ಬರು ಮುಝೆರಿನ್ ಅವರು ಪ್ರಾರ್ಥನೆಗೆ ಕರೆ ನೀಡುವುದನ್ನು ತಡೆದರು. ‘ಜೈಶ್ರೀರಾಮ್’ ಎಂದು ಘೋಷಣೆ ಕೂಗುವಂತೆ ಗ್ರಾಮಸ್ಥರನ್ನು ಬಲವಂತಪಡಿಸಿದರು ಎಂದು ಹೇಳಲಾಗಿದೆ.
ಘಟನೆಗೆ ಸಂಬಂಧಿಸಿ ಗಸ್ತುತಂಡದ ನೇತೃತ್ವ ವಹಿಸಿದ್ದ ಅಧಿಕಾರಿಯನ್ನು ಸ್ಥಳದಿಂದ ವರ್ಗಾಯಿಸಲಾಗಿದೆ ಹಾಗೂ ಆತನನ್ನು ಕಾರ್ಯಾಚರಣೆಯ ಕರ್ತವ್ಯದಿಂದ ವಿಮುಕ್ತಿಗೊಳಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.