ಜಮ್ಮು ಕಾಶ್ಮೀರ | ಗುಂಡಿನ ಕಾಳಗದಲ್ಲಿ ಇಬ್ಬರು ಯೋಧರು ಹುತಾತ್ಮ
ಸಾಂದರ್ಭಿಕ ಚಿತ್ರ
ಶ್ರೀನಗರ : ಜಮ್ಮು ಹಾಗೂ ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿ ಶನಿವಾರ ಶಂಕಿತ ಉಗ್ರರು ಹಾಗೂ ಭದ್ರತಾ ಪಡೆ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಯೋಧರು ಮೃತಪಟ್ಟಿದ್ದಾರೆ. ಇಬ್ಪರು ನಾಗರಿಕರು ಗಾಯಗೊಂಡಿದ್ದಾರೆ.
ಅನಂತ್ನಾಗ್ ಜಿಲ್ಲೆಯ ಅಹ್ಲಾನ್ ಗಡೋಲೆಯಲ್ಲಿ ಇಂದು ಅಪರಾಹ್ನ ಎನ್ಕೌಂಟರ್ ಆರಂಭವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಕೋಟೆರ್ನಾಗ್ ಉಪ ವಿಭಾಗದ ಅರಣ್ಯದಲ್ಲಿ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭ ಸೇನಾ ಪಡೆಯ ಗಸ್ತು ತಂಡವನ್ನು ಭಯೋತ್ಪಾದಕರು ಗುರಿಯಾಗಿರಿಸಿ ದಾಳಿ ನಡೆಸಿದರು. ಸೇನೆಯ ವಿಶೇಷ ಪಡೆಗಳು ಹಾಗೂ ಪ್ಯಾರಾಟ್ರೂಪರ್ಗಳು ವಿದೇಶಿಗರೆಂದು ನಂಬಲಾದ ಶಂಕಿತ ಭಯೋತ್ಪಾದಕರನ್ನು ನಿಗ್ರಹಿಸುವ ಕಾರ್ಯಾಚರಣೆಯ ಭಾಗವಾಗಿದ್ದರು.
ಕಾರ್ಯಾಚರಣೆಯ ಸಂದರ್ಭ ಶಂಕಿತ ಭಯೋತ್ವಾದಕರು ವಿವೇಚನೆ ರಹಿತವಾಗಿ ಹಾರಿಸಿದ ಗುಂಡಿಗೆ ಇಬ್ಬರು ಯೋಧರು ಮೃತಪಟ್ಟರು ಹಾಗೂ ನಾಗರಿಕರು ಗಾಯಗೊಂಡರು. ನಾಗರಿಕರಿಗೆ ತತ್ಕ್ಷಣ ವೈದ್ಯಕೀಯ ನೆರವು ಒದಗಿಸಲಾಯಿತು ಹಾಗೂ ಅಲ್ಲಿಂದ ತೆರವುಗೊಳಿಸಲಾಯಿತು ಎಂದು ಭಾರತೀಯ ಸೇನೆಯ ಚಿನಾರ್ ಕಾಪ್ಸ್ ‘ಎಕ್ಸ್’ನ ಪೋಸ್ಟ್ನಲ್ಲಿ ಹೇಳಿದೆ.