ಜಮ್ಮು-ಕಾಶ್ಮೀರಕ್ಕೆ ಕಾಲಮಿತಿಯಲ್ಲಿ ರಾಜ್ಯ ಸ್ಥಾನಮಾನ ಮರಳಿಕೆ | ತುರ್ತು ವಿಚಾರಣೆಗೆ ಒಪ್ಪಿದ ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಕಾಲ ಮಿತಿಯಲ್ಲಿ ಮರಳಿಸಬೇಕು ಎಂದು ಕೋರುವ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಕೊಂಡಿದೆ.
ಅರ್ಜಿಯನ್ನು ತುರ್ತು ವಿಚಾರಣೆಗೆ ಎತ್ತಿಕೊಳ್ಳಬೇಕು ಎಂಬುದಾಗಿ ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನು ಒಳಗೊಂಡ ನ್ಯಾಯಪೀಠವೊಂದರ ಎದುರು ಮನವಿ ಮಾಡಿದರು.
“ರಾಜ್ಯ ಸ್ಥಾನಮಾನವನ್ನು ಮರಳಿಸಬೇಕೆಂದು ಕೋರುವ ಅರ್ಜಿಯೊಂದನ್ನು ಸಲ್ಲಿಸಲಾಗಿದೆ. ಕಾಲಮಿತಿಯಲ್ಲಿ ರಾಜ್ಯ ಸ್ಥಾನಮಾನವನ್ನು ಮರಳಿಸಬೇಕಾಗಿದೆ ಎಂಬುದಾಗಿ ಕಳೆದ ವರ್ಷ ಈ ನ್ಯಾಯಾಲಯ ನೀಡಿರುವ ತೀರ್ಪಿನಲ್ಲಿ ಹೇಳಲಾಗಿತ್ತು” ಎಂದು ಹಿರಿಯ ವಕೀಲರು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್, “ಈ ಅರ್ಜಿಯೊಂದಿಗೆ ನಾನು ವ್ಯವಹರಿಸುತ್ತೇನೆ” ಎಂದು ಹೇಳಿದರು.
ಸುಪ್ರೀಂ ಕೋರ್ಟ್ನಲ್ಲಿ ಹೊಸ ಅರ್ಜಿಯನ್ನು ಶೈಕ್ಷಣಿಕ ವಲಯದ ಝಹೂರ್ ಅಹ್ಮದ್ ಭಟ್ ಮತ್ತು ಜಮ್ಮು ಮತ್ತು ಕಾಶ್ಮೀರದ ಸಾಮಾಜಿಕ-ರಾಜಕೀಯ ಕಾರ್ಯಕರ್ತ ಖುರ್ಷೀದ್ ಅಹ್ಮದ್ ಮಲಿಕ್ ಸಲ್ಲಿಸಿದ್ದಾರೆ.
2023 ಡಿಸೆಂಬರ್ 11ರಂದು, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ ಸಂವಿಧಾನದ 370ನೇ ವಿಧಿ ರದ್ದತಿಯನ್ನುಸುಪ್ರೀಂ ಕೋರ್ಟ್ ಸರ್ವಾನುಮತದಿಂದ ಎತ್ತಿಹಿಡಿದಿತ್ತು. 2019 ಆಗಸ್ಟ್ 5ರಂದು 370ನೇ ವಿಧಿಯನ್ನು ರದ್ದುಗೊಳಿಸಲಾಗಿತ್ತು.
ವಿಧಾನಸಭಾ ಚುನಾವಣೆಯನ್ನು 2024 ಸೆಪ್ಟಂಬರ್ ಒಳಗೆ ನಡೆಸಬೇಕು ಮತ್ತು ರಾಜ್ಯ ಸ್ಥಾನಮಾನವನ್ನು “ಅತಿ ಶೀಘ್ರದಲ್ಲಿ” ಮರಳಿಸಬೇಕು ಎಂಬುದಾಗಿಯೂ ನ್ಯಾಯಾಲಯ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿತ್ತು.
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಸೆಪ್ಟಂಬರ್ 18ರಿಂದ ಅಕ್ಟೋಬರ್ 1ರವರೆಗೆ ಮೂರು ಹಂತಗಳಲ್ಲಿ ಚುನಾವಣೆ ನಡೆದಿದೆ. ಪ್ರಸಕ್ತ ಕೇಂದ್ರಾಡಳಿತ ಪ್ರದೇಶದಲ್ಲಿ ನ್ಯಾಶನಲ್ ಕಾಂಗ್ರೆಸ್-ಕಾಂಗ್ರೆಸ್ ಮೈತ್ರಿಕೂಟವು ಅಧಿಕಾರಕ್ಕೆ ಬಂದಿದೆ. ನ್ಯಾಶನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಉಮರ್ ಅಬ್ದುಲ್ಲಾ ಬುಧವಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.