Fact-Check | ಜಮ್ಮು ಕಾಶ್ಮೀರದ ಹಳೆಯ ಭೂಕಂಪದ ವೀಡಿಯೋ ಇತ್ತೀಚಿನ 'ಕೋಲ್ಕತ್ತಾ ಭೂಕಂಪ' ಎಂದು ವೈರಲ್

ಕೋಲ್ಕತ್ತಾದಲ್ಲಿ ಭೂಕಂಪ ಸಂಭವಿಸಿದೆ ಎಂದು ತಪ್ಪಾಗಿ ಹೇಳುವ ಸಾಮಾಜಿಕ ಮಾಧ್ಯಮ ಪೋಷ್ಟ್ ಗಳ ಸ್ಕ್ರೀನ್ಶಾಟ್ಗಳು. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್ನಿಂದ ಮಾರ್ಪಡಿಸಲಾಗಿದೆ)
ತೀರ್ಪು ತಪ್ಪು
ವೀಡಿಯೋ ಆಗಸ್ಟ್ ೨೦೨೪ ರ ಹಿಂದಿನದು, ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ಮಧ್ಯಮ ಪ್ರಮಾಣದ ಭೂಕಂಪಗಳು ಸಂಭವಿಸಿದ ಸಮಯದಲ್ಲಿ ಚಿತ್ರೀಕರಿಸಲಾಗಿವೆ.
ಹೇಳಿಕೆ ಏನು?
ಫೆಬ್ರವರಿ 25, 2025 ರಂದು ಬಂಗಾಳ ಕೊಲ್ಲಿಯಲ್ಲಿ ಸಂಭವಿಸಿದ ಭೂಕಂಪದ ನಂತರ ಕೋಲ್ಕತ್ತಾದಲ್ಲಿ ಸಂಭವಿಸಿದ ಕಂಪನದ ಪರಿಣಾಮವನ್ನು ಇದು ತೋರಿಸುತ್ತದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಫ್ಯಾನ್ ನಡುಗುತ್ತಿರುವ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಹಿಂದೂಸ್ತಾನ್ ಟೈಮ್ಸ್ ಪ್ರಕಾರ, ಈ 5.1 ತೀವ್ರತೆಯ ಭೂಕಂಪನದ ನಡುಕ ಕೋಲ್ಕತ್ತಾದಲ್ಲಿ ಕಂಡುಬಂದಿದೆ.
ಎಕ್ಸ್ ಬಳಕೆದಾರರೊಬ್ಬರು ಈ ವೀಡಿಯೋವನ್ನು ಹಂಚಿಕೊಂಡಿದ್ದು ಅದರ ಶೀರ್ಷಿಕೆ ಹೀಗಿದೆ "ಕೋಲ್ಕತ್ತಾದಲ್ಲಿ ಭೂಕಂಪದ ನಡುಕ ಅನುಭವಿಸಿದೆ". ಈ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಭಾರತೀಯ ಸುದ್ದಿ ವಾಹಿನಿ ನ್ಯೂಸ್ 18 ಸಹ ಈ ವೀಡಿಯೋವನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) "ಕೋಲ್ಕತ್ತಾ ಲೈವ್ನಲ್ಲಿ ಪ್ರಬಲ ಭೂಕಂಪನ ಕಂಪನಗಳು" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ.
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೈರಲ್ ಪೋಷ್ಟ್ ಗಳ ಸ್ಕ್ರೀನ್ಶಾಟ್. (ಮೂಲ: ಎಕ್ಸ್/ಸ್ಕ್ರೀನ್ಶಾಟ್/ಲಾಜಿಕಲಿ ಫ್ಯಾಕ್ಟ್ಸ್ನಿಂದ ಮಾರ್ಪಡಿಸಲಾಗಿದೆ)
ಆದರೆ, ವೀಡಿಯೋ ಭಾರತದ ಜಮ್ಮು ಕಾಶ್ಮೀರದಿಂದ ಬಂದಿದೆ ಮತ್ತು ೨೦೨೪ ರ ಹಿಂದಿನದು ಎಂದು ನಾವು ಕಂಡುಕೊಂಡಿದ್ದೇವೆ. ಇದು ಇತ್ತೀಚೆಗೆ ಕೋಲ್ಕತ್ತಾದಲ್ಲಿ ಅನುಭವಿಸಿದ ಕಂಪನಗಳಿಗೆ ಸಂಬಂಧಿಸಿಲ್ಲ.
ವಾಸ್ತವಾಂಶಗಳೇನು?
ರಿವರ್ಸ್ ಇಮೇಜ್ ಸರ್ಚ್, ಸುದ್ದಿ ವೆಬ್ಸೈಟ್ಗಳು ಆಗಸ್ಟ್ ೨೦೨೪ ರಲ್ಲಿ ವೀಡಿಯೋವನ್ನು ಪೋಷ್ಟ್ ಮಾಡಿರುವುದನ್ನು ತೋರಿಸಿದೆ.
ಸುದ್ದಿ ಚಾನೆಲ್ ಡಿಡಿ ಇಂಡಿಯಾ ಆಗಸ್ಟ್ ೨೦, ೨೦೨೪ ರಂದು ಎಕ್ಸ್ನಲ್ಲಿ ವೀಡಿಯೋವನ್ನು ಪೋಷ್ಟ್ ಮಾಡಿದೆ ಮತ್ತು (ಇಲ್ಲಿ ಆರ್ಕೈವ್ ಮಾಡಲಾಗಿದೆ), "ರಿಕ್ಟರ್ ಮಾಪಕದಲ್ಲಿ ೪.೯ ತೀವ್ರತೆಯ #ಭೂಕಂಪವು ಜಮ್ಮು ಮತ್ತು ಕಾಶ್ಮೀರವನ್ನು ಅಪ್ಪಳಿಸಿತು" ಎಂದು ಬರೆದಿದೆ.
ಅದೇ ರೀತಿ, ಜೀ ನ್ಯೂಸ್ ಸುದ್ದಿ ವಾಹಿನಿಯು "ಜಮ್ಮು ಮತ್ತು ಕಾಶ್ಮೀರದಲ್ಲಿ ರಿಕ್ಟರ್ ಮಾಪಕದಲ್ಲಿ ೪.೯ ತೀವ್ರತೆಯ ಭೂಕಂಪ" ಎಂದು ಹೇಳುವ ಕ್ಲಿಪ್ ಅನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಎಕ್ಸ್ ನಲ್ಲಿ ಹಂಚಿಕೊಂಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಭವಿಸಿದ ಭೂಕಂಪದಿಂದ ಫ್ಯಾನ್ಸ್ ನಡುಗಲು ಪ್ರಾರಂಭಿಸಿದ್ದಾವೆ ಎಂದು ಹೇಳುವ ಹಿಂದಿ ಕ್ಲಿಪ್ ಅನ್ನು ಎಬಿಪಿ ನ್ಯೂಸ್ ಕೂಡ ಹಂಚಿಕೊಂಡಿದೆ.
ಸುದ್ದಿ ವೆಬ್ಸೈಟ್ಗಳು ಪೋಷ್ಟ್ ಮಾಡಿದ ವೀಡಿಯೋ ಕಂಡುಬಂದಿದೆ. (ಮೂಲ: ಡಿಡಿ ಇಂಡಿಯಾ/ಎಬಿಪಿ ನ್ಯೂಸ್/ಲಾಜಿಕಲ್ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)
ಆಗಸ್ಟ್ ೨೦, ೨೦೨೪ ರಂದು ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಮಧ್ಯಮ ತೀವ್ರತೆಯ ಎರಡು ಭೂಕಂಪಗಳು ದಾಖಲಾಗಿವೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ವರದಿ ಮಾಡಿದೆ.
ತೀರ್ಪು
ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಭವಿಸಿದ ಭೂಕಂಪದ ಹಳೆಯ ವೀಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಇದು ಇತ್ತೀಚೆಗೆ ಬಂಗಾಳಕೊಲ್ಲಿಯಲ್ಲಿ ಸಂಭವಿಸಿದ ಭೂಕಂಪದ ಪರಿಣಾಮವಾಗಿ ಕೋಲ್ಕತ್ತಾದಲ್ಲಿ ಸಂಭವಿಸಿದ ಕಂಪನವನ್ನು ತೋರಿಸುತ್ತದೆ ಎಂದು ತಪ್ಪಾಗಿ ಹೇಳಲಾಗುತ್ತಿದೆ.
(ಅನುವಾದಿಸಿದವರು: ರಜಿನಿ ಕೆ.ಜಿ)
Read this fact-check in English here.
ಈ ಲೇಖನವನ್ನು ಮೊದಲು 'logicallyfacts.com'ಪ್ರಕಟಿಸಿದೆ. ʼಶಕ್ತಿ ಕಲೆಕ್ಟಿವ್ʼನ ಭಾಗವಾಗಿ ವಾರ್ತಾ ಭಾರತಿ ಪ್ರಕಟಿಸಿದೆ.