ಜಮ್ಮು-ಕಾಶ್ಮೀರ: ಶಂಕಿತ ಉಗ್ರರ ಗುಂಡಿನಿಂದ ಗಾಯಗೊಂಡಿದ್ದ ಪೊಲೀಸ್ ಅಧಿಕಾರಿ ಸಾವು
ಸಾಂದರ್ಭಿಕ ಚಿತ್ರ. | Photo : PTI
ಹೊಸದಿಲ್ಲಿ: ಶ್ರೀನಗರದಲ್ಲಿ ಅಕ್ಟೋಬರ್ 29ರಂದು ಶಂಕಿತ ಉಗ್ರರು ಹಾರಿಸಿದ ಗುಂಡಿನಿಂದ ಗಾಯಗೊಂಡಿದ್ದ ಜಮ್ಮು ಹಾಗೂ ಕಾಶ್ಮೀರದ ಪೊಲೀಸ್ ಅಧಿಕಾರಿ ಹೊಸದಿಲ್ಲಿಯ ಏಮ್ಸ್ ನಲ್ಲಿ ಗುರುವಾರ ಮೃತಪಟ್ಟಿದ್ದಾರೆ.
ಉಗ್ರರು ಹಾರಿಸಿದ ಗುಂಡಿನಿಂದ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಜಮ್ಮು ಹಾಗೂ ಕಾಶ್ಮೀರದ ಪೊಲೀಸ್ ಅಧಿಕಾರಿ ಮಸ್ರೂರ್ ಅಹ್ಮದ್ ವಾನಿ ಅವರನ್ನು ಡಿಸೆಂಬರ್ 6ರಂದು ದಿಲ್ಲಿಗೆ ಸ್ಥಳಾಂತರಿಸಲಾಗಿತ್ತು. ಶ್ರೀನಗರದ ಈದ್ಗಾ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ವಾನಿ ಅವರಿಗೆ ತೀರಾ ಸಮೀಪದಿಂದ ಉಗ್ರರು ಗುಂಡು ಹಾರಿಸಿದ್ದರು
‘‘ಸಬ್ ಇನ್ಸ್ಪೆಕ್ಟರ್ ಮಸ್ರೂರ್ ಅಹ್ಮದ್ ವಾನಿ ಅವರ ಸಾವಿನ ಸುದ್ದಿ ತಿಳಿದು ತೀವ್ರ ದುಃಖವಾಯಿತು. ಶ್ರೀನಗರದಲ್ಲಿ ಇತ್ತೀಚೆಗೆ ತನ್ನ ನೆರೆಯ ಬಾಲಕರೊಂದಿಗೆ ಕ್ರಿಕೆಟ್ ಆಟವಾಡುತ್ತಿದ್ದ ಸಂದರ್ಭ ಶಂಕಿತ ಉಗ್ರರ ಗುಂಡಿನಿಂದ ಗಾಯಗೊಂಡರೂ ಅವರು ಕೆಚ್ಚೆದೆಯಿಂದ ಹೋರಾಡಿದರು. ಅವರ ಪ್ರೀತಿಪಾತ್ರರಿಗೆ ಹಾಗೂ ಅವರ ಜಮ್ಮು ಹಾಗೂ ಕಾಶ್ಮೀರ ಪೊಲೀಸಿನ ಸಹೋದ್ಯೋಗಿಗಳಿಗೆ ಸಂತಾಪ ವ್ಯಕ್ತಪಡಿಸುತ್ತೇನೆ’’ ಎಂದು ಜಮ್ಮು ಹಾಗೂ ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫರೆನ್ಸ್ನ ಉಪಾಧ್ಯಕ್ಷ ಉಮರ್ ಅಬ್ದುಲ್ಲಾ ಹೇಳಿದ್ದಾರೆ.
ವಾನಿ ಅವರು ಭಯೋತ್ಪಾದನೆಯ ಅಪಾಯದ ನಡುವೆಯೂ ಧೈರ್ಯದಿಂದ ಸೇವೆ ಸಲ್ಲಿಸಿದ ದಿಟ್ಟ ಅಧಿಕಾರಿ. ಅವರ ಬಲಿದಾನ ಜಮ್ಮು ಹಾಗೂ ಕಾಶ್ಮೀರ ಪೊಲೀಸರು ಪ್ರತಿ ದಿನ ಎದುರಿಸುತ್ತಿರುವ ಸಂಕಷ್ಟದ ಪರಿಸ್ಥಿತಿಯನ್ನು ಪ್ರತಿಬಿಂಬಿಸಿದೆ. ಅವರು ಭಯೋತ್ಪಾದನೆಯ ಕರಿ ನೆರಳಿನಿಂದ ನಮ್ಮ ಸಮುದಾಯವನ್ನು ರಕ್ಷಿಸಲು ಜೀವವನ್ನೇ ಮುಡಿಪಾಗಿಟ್ಟರು ಎಂದು ಜಮ್ಮು ಹಾಗೂ ಕಾಶ್ಮೀರದ ಡಿಜಿಪಿ ಆರ್.ಆರ್. ಸ್ವೈನ್ ತಿಳಿಸಿದ್ದಾರೆ.