ಜಮ್ಮು-ಕಾಶ್ಮೀರ: ಗುಂಡಿನ ಕಾಳಗ, ಶಂಕಿತ ಉಗ್ರ ಸಾವು
ಸಾಂದರ್ಭಿಕ ಚಿತ್ರ (PTI)
ಶ್ರೀನಗರ : ಜಮ್ಮು ಹಾಗೂ ಕಾಶ್ಮೀರದ ಶೋಪಿಯಾನ ಜಿಲ್ಲೆಯಲ್ಲಿ ಭದ್ರತಾ ಪಡೆಯೊಂದಿಗೆ ಶುಕ್ರವಾರ ನಡೆದ ಗುಂಡಿನ ಕಾಳಗದಲ್ಲಿ ಲಷ್ಕರೆ ತಯ್ಯಿಬದ ಶಂಕಿತ ಉಗ್ರನೋರ್ವ ಹತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ಕಾಶ್ಮೀರ ಜಿಲ್ಲೆಯ ಚೋಟಿಗಾಂವ್ ಗ್ರಾಮದಲ್ಲಿ ಉಗ್ರನೋರ್ವ ಅಡಗಿರುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಶುಕ್ರವಾರ ಆ ಪ್ರದೇಶವನ್ನು ಮುಂಜಾನೆ ಸುತ್ತುವರಿಯಿತು ಹಾಗೂ ಶೋಧ ಕಾರ್ಯಾಚರಣೆ ನಡೆಸಿತು.
ಭದ್ರತಾ ಪಡೆ ಸಂದೇಹಾಸ್ಪದ ಸ್ಥಳವನ್ನು ತಲುಪುತ್ತಿದ್ದಂತೆ ಅಡಗಿ ಕುಳಿತಿದ್ದ ಶಂಕಿತ ಉಗ್ರ ಗುಂಡಿನ ದಾಳಿ ನಡೆಸಿದ. ಭದ್ರತಾ ಸಿಬ್ಬಂದಿ ಪ್ರತಿದಾಳಿ ನಡೆಸಿದರು. ಇದು ಗುಂಡಿನ ಚಕಮಕಿಗೆ ಕಾರಣವಾಯಿತು.
ಅನಂತರ ಗುಂಡಿನ ಕಾಳಗ ನಡೆದ ಸ್ಥಳದಲ್ಲಿ ಬಳಿಕ ಶಂಕಿತ ಉಗ್ರನ ಮೃತದೇಹ ಪತ್ತೆಯಾಯಿತು. ಮೃತಪಟ್ಟ ಶಂಕಿತ ಉಗ್ರನನ್ನು ಬಿಲಾಲ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದೆ. ಚೆಕ್ಚೋಲನ್ ಗ್ರಾಮದ ನಿವಾಸಿಯಾಗಿದ್ದ ಈತ ಲಷ್ಕರೆ ತಯ್ಯಿಬ ಸಂಘಟನೆಗೆ ಸೇರಿದ್ದಾನೆ.
ಸುದ್ಸಾನ್ ಕುಲ್ಗಾಂವ್ನ ನಿವಾಸಿ ಹಾಗೂ ಸ್ಥಳೀಯ ಸೇನಾ ಸಿಬ್ಬಂದಿ ಉಮರ್ ಫಯಾಝ್ನನ್ನು ಹತ್ಯೆಗೈದ ಹಾಗೂ ಇಬ್ಬರು ವಲಸೆ ಕಾರ್ಮಿಕರ ಸಾವಿಗೆ ಕಾರಣವಾದ ಬಾಂಬ್ ಸ್ಫೋಟಿಸಿದ ಪ್ರಕರಣ ಸೇರಿದಂತೆ ಹಲವು ಭಯೋತ್ಪಾದಕ ಚಟುವಟಿಕೆಯಲ್ಲಿ ಈತ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.