ಜಾರ್ಖಂಡ್ ಅಬಕಾರಿ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆ : ಮತ್ತೋರ್ವ ಆಕಾಂಕ್ಷಿ ಮೃತ್ಯು
Photo : indianexpress.com
ಜಾರ್ಖಂಡ್: ಅಬಕಾರಿ ಇಲಾಖೆಯ ಕಾನ್ಸ್ಟೇಬಲ್ ಹುದ್ದೆ ನೇಮಕಾತಿಗಾಗಿ ದೈಹಿಕ ಪರೀಕ್ಷೆ ವೇಳೆ ಕುಸಿದುಬಿದ್ದಿದ್ದ ಆಕಾಂಕ್ಷಿಯೋರ್ವ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ಇದರಿಂದ ಜಾರ್ಖಂಡ್ ಅಬಕಾರಿ ಇಲಾಖೆಯ ಕಾನ್ಸ್ಟೇಬಲ್ ಹುದ್ದೆ ನೇಮಕಾತಿಗಾಗಿ ದೈಹಿಕ ಪರೀಕ್ಷೆಯ ವೇಳೆ ಮೃತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.
ಜಮ್ಶೆಡ್ಪುರ ನಿವಾಸಿ ಮರಮುಲ್ಲಾ ಮಾರಯ್ಯ ಮೃತರು. ದೈಹಿಕ ಪರೀಕ್ಷೆ ವೇಳೆ ಕುಸಿದು ಬಿದ್ದಿದ್ದ ಇವರನ್ನು ಗುರುವಾರ ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಿಸಲಾಗಿತ್ತು.
ದೈಹಿಕ ಪರೀಕ್ಷೆ ನೇಮಕಾತಿ ಪ್ರಕ್ರಿಯೆಯ ಮೊದಲ ಹಂತವಾಗಿದ್ದು, 60 ನಿಮಿಷಗಳಲ್ಲಿ ಓಟವನ್ನು ಪೂರ್ಣಗೊಳಿಸುವ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ಮೆಡಿಕಲ್ ಟೆಸ್ಟ್ ಗೆ ಅನುಮತಿ ನೀಡಲಾಗುತ್ತದೆ. ಅಬಕಾರಿ ಇಲಾಖೆ ಕಾರ್ಯದರ್ಶಿ ಮನೋಜ್ಕುಮಾರ್, ದೈಹಿಕ ಪರೀಕ್ಷೆ ವೇಳೆ ಕುಸಿದು ಬಿದ್ದಿದ್ದ ಮತ್ತೋರ್ವ ಆಕಾಂಕ್ಷಿ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.
ಈ ಕುರಿತು ಮಾತನಾಡಿದ RIMS ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷಕ ರಾಜೀವ್ ರಂಜನ್, ಓಟದ ಸಮಯದಲ್ಲಿ ಕುಸಿದುಬಿದ್ದ ನಂತರ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ರಕ್ತದೊತ್ತಡ ತೀರಾ ಕಡಿಮೆಯಾಗಿತ್ತು ಮತ್ತು ನಾಡಿ ಬಡಿತ ಹೆಚ್ಚಾಗಿತ್ತು. ಎದೆಯಲ್ಲಿ ದ್ರವಾಂಶವಿತ್ತು. ಉಸಿರಾಟ ಸಮಸ್ಯೆ ಎದುರಿಸುತ್ತಿದ್ದ ಕಾರಣ ರೋಗಿಯನ್ನು ವೆಂಟಿಲೇಟರ್ನಲ್ಲಿ ಇರಿಸಲಾಗಿತ್ತು. ಆ ಬಳಿಕ ಅವರ ಮೂತ್ರ ಪಿಂಡಕ್ಕೆ ತೀವ್ರವಾದ ಗಾಯವಾಗಿರುವುದು ಕಂಡು ಬಂದಿತ್ತು. ಮರಣೋತ್ತರ ಪರೀಕ್ಷೆ ನಂತರ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಹೇಳಿದ್ದಾರೆ.