ಜೆಇಇ ಮೈನ್: 56 ವಿದ್ಯಾರ್ಥಿಗಳಿಗೆ 100 ಎನ್ ಟಿಎ ಅಂಕ
ಸಾಂದರ್ಭಿಕ ಚಿತ್ರ Photo: PTI
ಹೊಸದಿಲ್ಲಿ: ಈ ಬಾರಿಯ ಜಂಟಿ ಪ್ರವೇಶ ಪರೀಕ್ಷೆ- ಮೈನ್ (ಜೆಇಇ-ಮೈನ್)-2024ರಲ್ಲಿ ದಾಖಲೆಯ 56 ಅಭ್ಯರ್ಥಿಗಳು ಶೇಕಡ 100 ಪರ್ಸೆಂಟೈಲ್ (100 ಎನ್ಟಿಎ ಅಂಕ) ಗಳಿಸಿದ್ದಾರೆ. ಇದರಲ್ಲಿ ಸಾನ್ವಿ ಜೈನ್ (ಕರ್ನಾಟಕ) ಮತ್ತು ಶಾನ್ಯ ಸಿನ್ಹಾ (ದೆಹಲಿ) ಎಂಬ ಇಬ್ಬರು ಮಹಿಳಾ ಅಭ್ಯರ್ಥಿಗಳು ಸೇರಿದ್ದಾರೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ಕಳೆದ ಜನವರಿ ಮತ್ತು ಏಪ್ರಿಲ್ನಲ್ಲಿ ನಡೆದ ಪೇಪರ್ 1 (ಬಿಇ/ಬಿಟೆಕ್) ಫಲಿತಾಂಶವನ್ನು ಬುಧವಾರ ರಾತ್ರಿ ಪ್ರಕಟಿಸಿದೆ.
ಈ ಬಾರಿಯ ಫಲಿತಾಂಶದ ಮತ್ತೊಂದು ಪ್ರಮುಖ ಅಂಶವೆಂದರೆ ಜೆಇಇ ಅಡ್ವಾನ್ಸ್ಡ್ ಗೆ ಅರ್ಹತೆ ಪಡೆಯಲು ಐದು ವರ್ಷಗಳಲ್ಲೇ ಗರಿಷ್ಠ ಜೆಇಇ-ಮೈನ್ ಅರ್ಹತಾ ಪರ್ಸೆಂಟೈಲ್ ಈ ಬಾರಿ ದಾಖಲಾಗಿದೆ. ದೇಶದ 23 ಐಐಟಿಗಳಿಗೆ ಪ್ರವೇಶ ಪಡೆಯಲು ಬಯಸುವ ಪ್ರವೇಶ ಪರೀಕ್ಷೆ ಜೆಇಇ ಅಡ್ವಾನ್ಸ್ಡ್ ಕಡ್ಡಾಯವಾಗಿರುತ್ತದೆ.
ರಾಜ್ಯವಾರು ತೆಲಂಗಾಣದ ಗರಿಷ್ಠ 15 ಅಭ್ಯರ್ಥಿಗಳು ಗರಿಷ್ಠ ಅಂಕ ಪಡೆದವರ ಪಟ್ಟಿಯಲ್ಲಿದ್ದಾರೆ. ಸತತ ಮೂರನೇ ವರ್ಷ ತೆಲಂಗಾಣ ಅಗ್ರಸ್ಥಾನಿಯಾಗಿದೆ.
ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದಲ್ಲಿ ತಲಾ ಏಳು ಮಂದಿ 100 ಪರ್ಸೆಂಟೈಲ್ ಅಂಕ ಪಡೆದಿದ್ದು, ದೆಹಲಿಯ 6 ಮಂದಿ ಈ ಕೀರ್ತಿ ಸಂಪಾದಿಸಿದ್ದಾರೆ. ಒಟ್ಟು 14.1 ಲಕ್ಷ ಅಭ್ಯರ್ಥಿಗಳ ಪೂಕಿ ಶೇಕಡ 96 ಮಂದಿ ಪರೀಕ್ಷೆ ತೆಗೆದುಕೊಂಡಿದ್ದರು. ಸುಮಾರು 24 ಸಾವಿರ ಸೀಟುಗಳು ಎನ್ಐಟಿಗಳಲ್ಲಿ ಲಭ್ಯವಿದೆ.
ಜನವರಿಯ ಜೆಇಇ ಮೈನ್ಸ್ನಲ್ಲಿ 23 ಹಾಗೂ ಎಪ್ರಿಲ್ ಪರೀಕ್ಷೆಯಲ್ಲಿ 33 ಮಂದಿ 100 ಪರ್ಸೆಂಟೈಲ್ ಪಡೆದಿದ್ದಾರೆ. ಈ ಪೈಕಿ 40 ಮಂದಿ ಸಾಮಾನ್ಯ ವರ್ಗಕ್ಕೆ ಸೇರಿದವರಿದ್ದರೆ, ಇತರ ಹಿಂದುಳಿದ ವರ್ಗಗಳ 10 ಮಂದಿ, ಸಾಮಾನ್ಯವರ್ಗದ ಆರ್ಥಿಕ ದುರ್ಬಲರು ಆರು ಮಂದಿ ಇದ್ದಾರೆ. ಎಸ್ಸಿ/ಎಸ್ಟಿ ವರ್ಗದ ಯಾರೂ 100 ಪರ್ಸೆಂಟೈಲ್ ಅಂಕ ಪಡೆದಿದ್ದಾರೆ.