ಬಹಿರಂಗಗೊಂಡ ಜೆಫ್ರಿ ಎಪ್ಸ್ಟೀನ್ ದಾಖಲೆಗಳು!: ನ್ಯೂಯಾರ್ಕ್ ನ್ಯಾಯಾಧೀಶರಿಂದ ದಾಖಲೆ ಬಹಿರಂಗ
ಜೆಫ್ರಿ ಎಪ್ಸ್ಟೀನ್ | Photo: livemint.com
ಹೊಸದಿಲ್ಲಿ: ಬಹಿರಂಗಗೊಂಡಿರುವ ಜೆಫ್ರಿ ಎಪ್ಸ್ಟೀನ್ ಕಡತಗಳಲ್ಲಿಯ ದಾಖಲೆಗಳು ವಿಶ್ವಾದ್ಯಂತ ಹಲವರಿಗೆ ಆಘಾತವನ್ನುಂಟು ಮಾಡಿವೆ. ಕೆಲವು ಹೆಸರುಗಳು ವಾರಗಳಿಂದಲೂ ಕೇಳಿಬಂದಿದ್ದರೆ, ಇತರರ ಹೆಸರುಗಳೂ ಇಣುಕುತ್ತಿರುವುದು ಅಚ್ಚರಿಯನ್ನುಂಟು ಮಾಡಿದೆ. ಅವುಗಳಲ್ಲಿ ಖ್ಯಾತ ಸೈದ್ಧಾಂತಿಕ ಭೌತಶಾಸ್ತ್ರಜ್ಞ ಹಾಗೂ ಜಗತ್ತು ಕಂಡಿರುವ ಅತ್ಯಂತ ಬುದ್ಧಿಶಾಲಿಗಳಲ್ಲಿ ಓರ್ವರಾದ ಸ್ಟೀಫನ್ ಹಾಕಿಂಗ್ ಅವರ ಹೆಸರೂ ಸೇರಿದೆ. ನ್ಯೂಯಾರ್ಕ್ ನ ನ್ಯಾಯಾಧೀಶರೋರ್ವರು ದಾಖಲೆಗಳನ್ನು ಬಹಿರಂಗಗೊಳಿಸಿದ ಬೆನ್ನಿಗೇ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿಂಗ್ ಕುರಿತು ಚರ್ಚೆ ಆರಂಭಗೊಂಡಿದೆ. ಒಂದು ವರ್ಷದ ಸುದೀರ್ಘ ಕಾನೂನು ಹೋರಾಟದ ಬಳಿಕ ಎಪ್ಸ್ಟೀನ್ ದಾಖಲೆಗಳು ಬಹಿರಂಗಗೊಂಡಿವೆ. ಎಪ್ಸ್ಟೀನ್ 2019ರಲ್ಲಿ ಜೈಲಿನಲ್ಲಿ ಮೃತಪಟ್ಟಿದ್ದು, ಆತನ ಸಾವನ್ನು ಆತ್ಮಹತ್ಯೆ ಎಂದು ಅಧಿಕೃತವಾಗಿ ಘೋಷಿಸಲಾಗಿತ್ತು.
ಹಾಕಿಂಗ್ ಕುರಿತು ಹೇಳುವುದಾದರೆ ಅವರ ಹೆಸರು ಎಪ್ಸ್ಟೀನ್ ಜನವರಿ 2015ರಲ್ಲಿ ತನ್ನ ಸಹಚರ ಗಿಸ್ಲೇನ್ ಮ್ಯಾಕ್ಸ್ವೆಲ್ಗೆ ಕಳುಹಿಸಿದ್ದ ಇ-ಮೇಲ್ ನಲ್ಲಿ ಉಲ್ಲೇಖಗೊಂಡಿತ್ತು. ದಾಖಲೆಗಳ ಪ್ರಕಾರ, ಶಿಕ್ಷೆಗೊಳಗಾದ ಲೈಂಗಿಕ ಅಪರಾಧಿ ಎಪ್ಸ್ಟೀನ್, ಹಾಕಿಂಗ್ ಅಪ್ರಾಪ್ತ ವಯಸ್ಕರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದರು ಎಂದು ವರ್ಜಿನಿಯಾ ಗಿಫ್ರೆ ಮಾಡಿದ್ದ ಆರೋಪವನ್ನು ನಿರಾಕರಿಸಲು ಬಹುಮಾನವನ್ನು ನೀಡುವ ಕುರಿತು ಇ-ಮೇಲ್ ನಲ್ಲಿ ಮಾತನಾಡಿದ್ದ ಎಂದು ಪೀಪಲ್ಸ್ ಮ್ಯಾಗಝಿನ್ ವರದಿ ಮಾಡಿದೆ.
‘ನೀನು ವರ್ಜಿನಿಯಾ ಮಾಡಿರುವ ಆರೋಪಗಳು ಸುಳ್ಳು ಎಂದು ಸಾಬೀತು ಮಾಡಲು ಮುಂದೆ ಬರುವ ಆಕೆಯ ಸ್ನೇಹಿತರಿಗೆ ಅಥವಾ ಕುಟುಂಬ ಸದಸ್ಯರಿಗೆ ಬಹುಮಾನವನ್ನು ನೀಡಬಹುದು. ಕ್ಲಿಂಟನ್ ಭೋಜನ ಕೂಟ ಮತ್ತು ವರ್ಜಿನ್ ದ್ವೀಪದಲ್ಲಿ ಹಾಕಿಂಗ್ ಅಪ್ರಾಪ್ತ ವಯಸ್ಕರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ಭಾಗವಹಿಸಿದ್ದರು ಎನ್ನುವುದು ಪ್ರಬಲವಾದ ಆರೋಪವಾಗಿದೆ” ಎಂದು ಆತ ಇ-ಮೇಲ್ ನಲ್ಲಿ ಬರೆದಿದ್ದ.
ಕಳಂಕಿತ ಫೈನಾನ್ಶಿಯರ್ ಎಪ್ಸ್ಟೀನ್ ವಿರುದ್ಧ ಮೊದಲ ಬಾರಿಗೆ ಲೈಂಗಿಕ ಅಪರಾಧಗಳ ಆರೋಪವನ್ನು ಹೊರಿಸುವುದಕ್ಕೆ ತಿಂಗಳುಗಳ ಮುನ್ನ ಮಾರ್ಚ್ 2006ರಲ್ಲಿ ಹಾಕಿಂಗ್ ವಿಜ್ಞಾನ ಪ್ರವಾಸದ ಅಂಗವಾಗಿ ಆತನ ಖಾಸಗಿ ಕೆರಿಬಿಯನ್ ದ್ವೀಪಕ್ಕೆ ಭೇಟಿ ನೀಡಿದ್ದರು ಎನ್ನಲಾಗಿದೆ.ಹಾಕಿಂಗ್ ಖಾಸಗಿ ಜಲಾಂತರ್ಗಾಮಿ ನೌಕೆಯಲ್ಲಿ ಯಾನವನ್ನೂ ಮಾಡಿದ್ದರು. ಅವರು ಮತ್ತು ಇತರ ವಿಜ್ಞಾನಿಗಳು ದ್ವೀಪದಲ್ಲಿಯ ಗುರುತ್ವಾಕರ್ಷಣೆ ಕುರಿತು ಎಪ್ಸ್ಟೀನ್ ಧನಸಹಾಯದೊಂದಿಗೆ ಆಯೋಜಿಸಲಾಗಿದ್ದ ಸಮ್ಮೇಳನದಲ್ಲಿ ಭಾಗವಹಿಸಿದ್ದರು ಎಂದು ದಿ ಇಂಡಿಪೆಂಡೆಂಟ್ ತನ್ನ ವರದಿಯಲ್ಲಿ ಹೇಳಿದೆ.
ಎಪ್ಸ್ಟೀನ್ ಭಾಗಿಯಾಗಿದ್ದ ಲೈಂಗಿಕ ದುರ್ವರ್ತನೆಗಳಲ್ಲಿ ಹಾಕಿಂಗ್ ಆರೋಪಿಯಾಗಿರಲಿಲ್ಲ. ಅಮಿಯೊಟ್ರಾಫಿಕ್ ಲ್ಯಾಟರಲ್ ಸಿಲೆರೊಸಿಸ್ (ಎಎಲ್ಎಸ್) ಕಾಯಿಲೆಯೊಂದಿಗೆ ಜೀವಮಾನವಿಡೀ ಹೋರಾಟದ ಬಳಿಕ ಹಾಕಿಂಗ್ 2018ರಲ್ಲಿ ತನ್ನ 76ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಈವರೆಗೆ ದಾಖಲೆಗಳ ಎರಡು ಕಂತುಗಳನ್ನು ಬಿಡುಗಡೆ ಮಾಡಲಾಗಿದ್ದು, ಇನ್ನಷ್ಟು ದಾಖಲೆಗಳು ಹೊರಬರುವ ನಿರೀಕ್ಷೆಯಿದೆ.