ಝಾನ್ಸಿ ಆಸ್ಪತ್ರೆ ಅಗ್ನಿ ದುರಂತದ ವೇಳೆ 20 ಶಿಶುಗಳನ್ನು ರಕ್ಷಿಸಿದ ಕೃಪಾಲ್ ಸಿಂಗ್
Photo : etvbharat
ಝಾನ್ಸಿ: ಉತ್ತರ ಪ್ರದೇಶದ ಝಾನ್ಸಿಯ ಮಹಾರಾಣಿ ಲಕ್ಷ್ಮೀಬಾಯಿ ವೈದ್ಯಕೀಯ ಕಾಲೇಜಿನಲ್ಲಿ ಶನಿವಾರ ಸಂಭವಿಸಿದ ಭೀಕರ ಅಗ್ನಿದುರಂತದ ವೇಳೆ ಕನಿಷ್ಠ 20 ಶಿಶುಗಳ ಜೀವವನ್ನು ರಕ್ಷಿಸುವ ಮೂಲಕ ಕೃಪಾಲ್ ಸಿಂಗ್ ರಜಪೂತ್ ಭಾರೀ ಪ್ರಶಂಸೆಗೆ ಕಾರಣರಾಗಿದ್ದಾರೆ.
ಕೃಪಾಲ್ ಸಿಂಗ್ ರಜಪೂತ್ ಮೊಮ್ಮಗನನ್ನು ಝಾನ್ಸಿ ವೈದ್ಯಕೀಯ ಕಾಲೇಜಿನ ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿತ್ತು. ರಾತ್ರಿ 10 ಗಂಟೆ ಸುಮಾರಿಗೆ ನರ್ಸ್ ಮಕ್ಕಳಿಗೆ ಊಟ ಉಣಿಸಲು ತಾಯಂದಿರನ್ನು NICU ವಾರ್ಡ್ ಗೆ ಕರೆದಿದ್ದಾರೆ. ನಾವು ಎನ್ ಐಸಿಯು ವಾರ್ಡ್ ಬಳಿ ಹೋದಾಗ ನರ್ಸ್ ಕೈಯಲ್ಲಿ ಬೆಂಕಿ ಆವರಿಸಿಕೊಂಡಿರುವ ಕುರ್ಚಿಯೊಂದಿಗೆ ಕಿರುಚುತ್ತಾ ಹೊರಬರುವುದನ್ನು ನಾವು ನೋಡಿದ್ದೇವೆ. ಅವರ ಬಟ್ಟೆಗೆ ಕೂಡ ಬೆಂಕಿ ಆವರಿಸಿತ್ತು. ಬೆಂಕಿಯನ್ನು ನೋಡಿದ ತಕ್ಷಣ ನಾನು ಮತ್ತೇನೂ ಯೋಚನೆ ಮಾಡದೆ NICU ಒಳಗಡೆ ಪ್ರವೇಶಿಸಿ ಮಕ್ಕಳನ್ನು ಸುರಕ್ಷಿತವಾಗಿ ಹೊರಗೆ ಕರೆದೊಯ್ಯಲು ಪ್ರಾರಂಭಿಸಿದೆ. ಇತರ ಮಕ್ಕಳ ಜೊತೆಗೆ ಮೊಮ್ಮಗನನ್ನು ಕೂಡ ರಕ್ಷಿಸುವಲ್ಲಿ ಕೃಪಾಲ್ ಸಿಂಗ್ ಯಶಸ್ವಿಯಾಗಿದ್ದಾರೆ.
ಆರಂಭದಲ್ಲಿ NICU ಮುಖ್ಯ ಬಾಗಿಲ ಮೂಲಕ 13 ಮಕ್ಕಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದೆ. NICUನಿಂದ ಹೊರಬರುವ ಹಾದಿಯಲ್ಲಿ ಬೆಂಕಿ ಆವರಿಸಿದ್ದರಿಂದ ಇತರರ ಜೊತೆ ಸೇರಿ NICU ವಾರ್ಡ್ನ ಕಿಟಕಿಯನ್ನು ಒಡೆದು ಬೆಂಕಿಯ ಜ್ವಾಲೆಗಳ ನಡುವಿನಿಂದ ಮತ್ತೆ 7 ನವಜಾತ ಶಿಶುಗಳನ್ನು ರಕ್ಷಿಸಿದ್ದೇನೆ ಎಂದು ಕೃಪಾಲ್ ಸಿಂಗ್ ಹೇಳಿದ್ದಾರೆ.
ಶುಕ್ರವಾರ ರಾತ್ರಿ ಝಾನ್ಸಿಯ ಮಹಾರಾಣಿ ಲಕ್ಷ್ಮೀಬಾಯಿ ವೈದ್ಯಕೀಯ ಕಾಲೇಜಿನ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 10 ನವಜಾತ ಶಿಶುಗಳು ಸಾವನ್ನಪ್ಪಿವೆ ಮತ್ತು 16 ಶಿಶುಗಳು ಗಾಯಗೊಂಡಿದೆ. ಝಾನ್ಸಿಯ ಆಸ್ಪತ್ರೆಯಲ್ಲಿನ ಅಗ್ನಿ ದುರಂತದ ಬಳಿಕ ಯುವಕ ಯಾಕೂಬ್ ಮನ್ಸೂರಿ ಅವರು ಸುದ್ದಿಯಾಗಿದ್ದರು. ಅಗ್ನಿ ದುರಂತದ ವೇಳೆ ಯಾಕೂಬ್ ಮನ್ಸೂರಿ ಅವರು ಹಲವು ಮಕ್ಕಳ ಪ್ರಾಣವನ್ನು ಉಳಿಸಿದ್ದರು, ಆದರೆ ಅವರ ಅವಳಿ ಮಕ್ಕಳು ಮೃತಪಟ್ಟಿದ್ದರು.