ಜಾರ್ಖಂಡ್ ವಿಧಾನಸಭೆ ಚುನಾವಣೆ: ಮೊದಲ ಹಂತದ ಮತದಾನದಲ್ಲಿ 900ಕ್ಕೂ ಅಧಿಕ ಮತದಾರರು ಶತಾಯುಷಿಗಳು!
ಸಾಂದರ್ಭಿಕ ಚಿತ್ರ
ರಾಂಚಿ: ಜಾರ್ಖಂಡ್ ವಿಧಾನ ಸಭೆ ಚುನಾವಣೆಗೆ ನವೆಂಬರ್ 13ರಂದು ನಡೆಯಲಿರುವ ಮೊದಲ ಹಂತದ ಮತದಾನದಲ್ಲಿ 43 ವಿಧಾನ ಸಭಾ ಕ್ಷೇತ್ರಗಳಲ್ಲಿ ಮತ ಚಲಾಯಿಸಲು ಅರ್ಹರಾದ ಮತದಾರರಲ್ಲಿ 533 ಮಹಿಳೆಯರು ಸೇರಿದಂತೆ 900ಕ್ಕೂ ಅಧಿಕ ಶತಾಯುಷಿಗಳಿದ್ದಾರೆ.
ಜಾರ್ಖಂಡ್ ವಿಧಾನ ಸಭೆಯ ಮತದಾನ ನವೆಂಬರ್ 13 ಹಾಗೂ ನವೆಂಬರ್ 20ರಂದು ಎರಡು ಹಂತಗಳಲ್ಲಿ ನಡೆಯಲಿದೆ. ಮತ ಎಣಿಕೆ ನವೆಂಬರ್ 23ರಂದು ನಡೆಯಲಿದೆ.
‘‘ರಾಜ್ಯದಲ್ಲಿ ನವೆಂಬರ್ 13ರಂದು ನಡೆಯುವ ವಿಧಾನ ಸಭೆ ಚುನಾವಣೆಯ ಮೊದಲ ಹಂತದಲ್ಲಿ ತಮ್ಮ ಮತ ಚಲಾಯಿಸಲು ಅರ್ಹರಾದವರಲ್ಲಿ 462 ಪುರುಷರು ಹಾಗೂ 533 ಪುರುಷರು ಸೇರಿದಂತೆ ಒಟ್ಟು 995 ಮತದಾರರು 100 ವರ್ಷ ದಾಟಿದವರಾಗಿದ್ದಾರೆ’’ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಮತದಾರರ ಪಟ್ಟಿ ಪ್ರಕಾರ ಜಾರ್ಖಂಡ್ನಲ್ಲಿ ಒಟ್ಟು 2.06 ಕೋಟಿ ಮತದಾರರಿದ್ದಾರೆ. ಇವರಲ್ಲಿ 1.13 ಲಕ್ಷ ಮತದಾರರು 85 ವಯಸ್ಸಿಗಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಅವರು ಹೇಳಿದ್ದಾರೆ.
ಮತದಾನ ಕೇಂದ್ರಗಳಲ್ಲಿ ಭಿನ್ನ ಸಾಮರ್ಥ್ಯರು ಹಾಗೂ ಹಿರಿಯ ನಾಗರಿಕರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ನವೆಂಬರ್ 13ರಂದು ಮೊದಲ ಹಂತದ ಮತದಾನ ನಡೆಯಲಿರುವ ಜಾರ್ಖಂಡ್ನಲ್ಲಿ 43 ವಿಧಾನ ಸಭಾ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಶುಕ್ರವಾರ ಆರಂಭವಾಗಲಿದ್ದು, ಅಕ್ಟೋಬರ್ 25ರ ವರೆಗೆ ನಡೆಯಲಿದೆ.