ಜಾರ್ಖಂಡ್ ಚುನಾವಣೆ | ಜೆಎಂಎಂ-ಕಾಂಗ್ರೆಸ್- ಆರ್ ಜೆಡಿ ಮೈತ್ರಿಕೂಟ ರಚನೆಯ ಹಿಂದೆ ಸ್ವಾರ್ಥ ಅಡಗಿದೆ : ಜೆ ಪಿ ನಡ್ಡಾ ಆರೋಪ
ಜೆ.ಪಿ.ನಡ್ಡಾ | PC : PTI
ಧನಬಾದ್: ವಂಶಪಾರಂಪರ್ಯ ರಾಜಕಾರಣ ಹಾಗೂ ಮತ ಬ್ಯಾಂಕ್ ರಾಜಕಾರಣಕ್ಕಾಗಿ ತುಷ್ಟೀಕರಣವನ್ನು ಉತ್ತೇಜಿಸುವ ಜೆಎಂಎಂ-ಕಾಂಗ್ರೆಸ್-ಆರ್ಜೆಡಿ ಮೈತ್ರಿ ಕೂಟದ ರಚನೆ ಹಿಂದೆ ಸ್ವಾರ್ಥ ಉದ್ದೇಶ ಅಡಗಿದೆ ಎಂದು ರವಿವಾರ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಆರೋಪಿಸಿದರು.
ರಾಜ್ಯದಲ್ಲಿ ನರೇಂದ್ರ ಮೋದಿ ಚಾಲನೆ ನೀಡಿರುವ ಅಭಿವೃದ್ಧಿ ಕಾರ್ಯಗಳಿಗೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅಡೆತಡೆಯುಂಟು ಮಾಡುತ್ತಿದ್ದಾರೆ ಎಂದೂ ಅವರು ಆರೋಪಿಸಿದರು.
ಧನಬಾಗ್ ಜಿಲ್ಲೆಯ ಸಿಂದ್ರಿಯಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ನಡ್ಡಾ, “ಜೆಎಂಎಂ-ಕಾಂಗ್ರೆಸ್-ಆರ್ಜೆಡಿ ಮೈತ್ರಿಕೂಟ ರಚನೆಯ ಹಿಂದೆ ಸ್ವಾರ್ಥ ಉದ್ದೇಶ ಅಡಗಿದೆ. ಈ ಸರಕಾರವು ಆದಿವಾಸಿ ವಿರೋಧಿ, ದಲಿತ ವಿರೋಧಿ ಹಾಗೂ ರೈತ ವಿರೋಧಿಯಾಗಿದೆ. ಈ ಸರಕಾರವು ಭ್ರಷ್ಟಾಚಾರ, ವಂಶಪಾರಂಪರ್ಯ ರಾಜಕಾರಣ ಹಾಗೂ ಮತ ಬ್ಯಾಂಕ್ ಗಾಗಿ ತುಷ್ಟೀಕರಣವನ್ನು ಉತ್ತೇಜಿಸುತ್ತಿದೆ” ಎಂದು ವಾಗ್ದಾಳಿ ನಡೆಸಿದರು.
ಹೇಮಂತ್ ಸೊರೇನ್ ಸರಕಾರ ಒಳನುಸುಳುವಿಕೆಯನ್ನು ಪ್ರೋತ್ಸಾಹಿಸುತ್ತಿದೆ ಎಂದು ದೂರಿದ ನಡ್ಡಾ, ಒಂದು ವೇಳೆ ಬಿಜೆಪಿಯೇನಾದರೂ ಅಧಿಕಾರಕ್ಕೆ ಬಂದರೆ, ಆದಿವಾಸಿ ಮಹಿಳೆಯರನ್ನು ವಿವಾಹವಾಗಿರುವ ನುಸುಳುಕೋರರ ವಾರಸುದಾರರಿಗೆ ಭೂ ವರ್ಗಾವಣೆಯಾಗದಂತೆ ತಡೆಯಲು ಕಾನೂನೊಂದನ್ನು ಜಾರಿಗೊಳಿಸಲಾಗುವುದು ಎಂದು ಭರವಸೆ ನೀಡಿದರು.