ಜಾರ್ಖಂಡ್ ವಿಧಾನಸಭಾ ಚುನಾವಣೆ | ಆದಿವಾಸಿಗಳ ಜಲ, ನೆಲ, ಅರಣ್ಯವನ್ನು ಕಸಿದುಕೊಳ್ಳಲು ಬಿಜೆಪಿ ಬಯಸುತ್ತಿದೆ : ರಾಹುಲ್ ಗಾಂಧಿ ಆರೋಪ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ | PTI
ಸಿಮ್ಡೆಗಾ : ಆದಿವಾಸಿಗಳಿಂದ ಜಲ, ನೆಲ, ಅರಣ್ಯವನ್ನು ಕಸಿದುಕೊಳ್ಳಾಲು ಬಿಜೆಪಿ ಬಯಸುತ್ತಿದೆ ಎಂದು ಶುಕ್ರವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದರು.
ಜಾರ್ಖಂಡ್ ರಾಜ್ಯದ ಸಿಮ್ಡೆಗಾದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ನೆಲ, ಜಲ ಹಾಗೂ ಅರಣ್ಯ ತಮಗೆ, ಆರ್ಎದಸ್ಎಡಸ್ಗೆಂ ಹಾಗೂ ಬಂಡವಾಳಶಾಹಿಗಳಿಗೆ ಸೇರಿದ್ದು ಎಂದು ಬಿಜೆಪಿಯು ನಂಬಿರುವುದರಿಂದ ಪ್ರಧಾನಿ ಮೋದಿ ನಿಮ್ಮನ್ನು ವನವಾಸಿ ಎಂದು ಕರೆಯುತ್ತಿದ್ದಾರೆ. ಹೊಸದಾಗಿ ಚಾಲ್ತಿಗೆ ತರಲಾಗಿರುವ ಅಭಿವೃದ್ಧಿ ಎಂಬ ಪದದ ಹೆಸರಿನಲ್ಲಿ ಆದಿವಾಸಿಗಳ ಜಮೀನನ್ನು ಕಸಿದುಕೊಳ್ಳುವುದರಲ್ಲಿ ಬಿಜೆಪಿ ನಂಬಿಕೆ ಇರಿಸಿದೆ. ಅದಕ್ಕೆ ಆದಿವಾಸಿಗಳಿಂದ ನೆಲ, ಜಲ, ಅರಣ್ಯವನ್ನು ಕಸಿದುಕೊಳ್ಳುವುದು ಬೇಕಿದೆ” ಎಂದು ವಾಗ್ದಾಳಿ ನಡೆಸಿದರು.
ಜಾರ್ಖಂಡ್ ಚುನಾವಣೆಯು ಇಂಡಿಯಾ ಮೈತ್ರಿಕೂಟ ಹಾಗೂ ಬಿಜೆಪಿ-ಆರೆಸ್ಸೆಸ್ ನಡುವಿನ ಸೈದ್ಧಾಂತಿಕ ಹೋರಾಟ. ದೇಶದ ಸಂವಿಧಾನವನ್ನು ನಾಶಪಡಿಸುವುದು ಆರೆಸ್ಸೆಸ್-ಬಿಜೆಪಿ ಕಾರ್ಯಸೂಚಿಯಾಗಿದ್ದು, ಇಂಡಿಯಾ ಮೈತ್ರಿಕೂಟವು ಅದನ್ನು ರಕ್ಷಿಸಲು ಬಯಸುತ್ತಿದೆ ಎಂದು ಅವರು ಹೇಳಿದರು.
ಒಂದು ವೇಳೆ ಕಾಂಗ್ರೆಸ್ ಪಕ್ಷವೇನಾದರೂ ಅಧಿಕಾರಕ್ಕೆ ಬಂದರೆ, ಜಾತಿ ಗಣತಿಯನ್ನು ಖಾತರಿಪಡಿಸಲಾಗುವುದು ಹಾಗೂ ಮೀಸಲಾತಿ ಮೇಲಿರುವ ಶೇ. 50ರ ಮಿತಿಯನ್ನು ತೆಗೆದು ಹಾಕಲಾಗುವುದು ಎಂದು ಅವರು ಭರವಸೆ ನೀಡಿದರು.
“ಸಂವಿಧಾನ ನಿರಂತರವಾಗಿ ದಾಳಿಗೊಳಗಾಗುತ್ತಿದ್ದು, ಅದನ್ನು ರಕ್ಷಿಸಬೇಕಾದ ಅಗತ್ಯವಿದೆ. ನಾವು ಯಾವುದೇ ಬೆಲೆ ತೆತ್ತಾದರೂ ಮೀಸಲಾತಿ ಮೇಲಿನ ಶೇ. 50ರ ಮಿತಿಯನ್ನು ತೆಗೆದು ಹಾಕುತ್ತೇವೆ. ಜಾರ್ಖಂಡ್ ನಲ್ಲಿ ನಾವೇನಾದರೂ ಅಧಿಕಾರಕ್ಕೆ ಬಂದರೆ, ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಹಾಗೂ ಇತರೆ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕ್ರಮವಾಗಿ ಶೇ. 26ರಿಂದ 28ಕ್ಕೆ, ಶೇ. 10ರಿಂದ 12ಕ್ಕೆ ಹಾಗೂ ಶೇ. 14ರಿಂದ ಶೇ. 27ಕ್ಕೆ ಏರಿಕೆ ಮಾಡಲಾಗುವುದು” ಎಂದೂ ಅವರು ಭರವಸೆ ನೀಡಿದರು.
ಹಲವಾರು ಸಂಸ್ಥೆಗಳು ಹಾಗೂ ದೇಶದ ಸಂಪತ್ತಿನಲ್ಲಿ ಆದಿವಾಸಿಗಳು, ದಲಿತರು ಹಾಗೂ ಇತರೆ ಹಿಂದುಳಿದ ವರ್ಗಗಳ ಪಾಲುದಾರಿಕೆಯನ್ನು ಗುರುತಿಸಲು ಜಾತಿ ಗಣತಿ ಅನಿವಾರ್ಯವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.
“ನಾನು ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದಾಗ, ಪ್ರಧಾನಿ ಮೋದಿ ಮೌನ ವಹಿಸಿದರು ಹಾಗೂ ನಂತರ ರಾಹುಲ್ ಗಾಂಧಿಗೆ ದೇಶವನ್ನು ವಿಭಜಿಸುವುದು ಬೇಕಿದೆ ಎಂದು ಆರೋಪಿಸಿದರು” ಎಂದು ರಾಹುಲ್ ಗಾಂಧಿ ದೂರಿದರು.
ಜಾರ್ಖಂಡ್ ವಿಧಾನಸಭಾ ಚುನಾವಣೆ ಪ್ರಕಟವಾದಂದಿನಿಂದ ರಾಹುಲ್ ಗಾಂಧಿ ಜಾರ್ಖಂಡ್ ಗೆ ನೀಡುತ್ತಿರುವ ಎರಡನೆ ಭೇಟಿ ಇದಾಗಿದೆ.
ನವೆಂಬರ್ 13 ಹಾಗೂ ನವೆಂಬರ್ 20ರಂದು ಎರಡು ಹಂತದಲ್ಲಿ ಜಾರ್ಖಂಡ್ ವಿಧಾನಸಭಾ ಚುನಾವಣೆ ನಡೆಯಲಿದ್ದು, ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ.