ಈಡಿ ಯಿಂದ ಹೊಸ ಸಮನ್ಸ್ ಬಳಿಕ ದಿಲ್ಲಿಗೆ ತೆರಳಿದ ಜಾರ್ಖಂಡ್ ಸಿಎಂ
ಹೇಮಂತ ಸೊರೇನ್ | Photo:PTI
ರಾಂಚಿ : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತನಿಖೆಗೆ ಹಾಜರಾಗುವಂತೆ ಸೂಚಿಸಿ ಜಾರಿ ನಿರ್ದೇಶನಾಲಯ (ಈಡಿ)ವು ಹೊಸದಾಗಿ ಸಮನ್ಸ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ ಸೊರೇನ್ ಅವರು ಶನಿವಾರ ರಾತ್ರಿ ದಿಢೀರ್ ದಿಲ್ಲಿಗೆ ತೆರಳಿದ್ದಾರೆ.
ಜ.29 ಅಥವಾ 30ರಂದು ವಿಚಾರಣೆಗೆ ನೀವು ಲಭ್ಯರಿದ್ದೀರಾ ಎಂದು ಈಡಿ ಸೊರೇನ್ ಅವರನ್ನು ಕೇಳಿರುವ ಹಿನ್ನೆಲೆಯಲ್ಲಿ ನಿಗದಿತ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಅವರ ದಿಢೀರ್ ದಿಲ್ಲಿ ಭೇಟಿಯು ಊಹಾಪೋಹಗಳನ್ನು ಹುಟ್ಟುಹಾಕಿದೆ.
ಸೊರೇನ್ ಕಾನೂನು ಸಮಾಲೋಚನೆಗಾಗಿ ದಿಲ್ಲಿಗೆ ತೆರಳಿದ್ದಾರೆ ಎಂದು ಮೂಲವೊಂದು ತಿಳಿಸಿದೆಯಾದರೂ ಮುಖ್ಯಮಂತ್ರಿಗಳ ಕಚೇರಿಯು ಇದನ್ನು ದೃಢಪಡಿಸಿಲ್ಲ.
ಈಡಿ ಜ.20ರಂದು ಸೋರೇನ್ ಅಧಿಕೃತ ನಿವಾಸದಲ್ಲಿ ಅವರಿಂದ ಅಕ್ರಮ ಹಣ ವರ್ಗಾವಣೆ (ತಡೆ) ಕಾಯ್ದೆಯಡಿ ಹೇಳಿಕೆಯನ್ನು ದಾಖಲಿಸಿಕೊಂಡಿತ್ತು.
ಅಂದು ವಿಚಾರಣೆಯು ಅಪೂರ್ಣವಾಗಿದ್ದರಿಂದ ಈಡಿ ಹೊಸ ಸಮನ್ಸ್ ಜಾರಿಗೊಳಿಸಿದೆ ಎನ್ನಲಾಗಿದೆ.
ಈಡಿ ಪ್ರಕಾರ, ತನಿಖೆಯು ಜಾರ್ಖಂಡ್ ನಲ್ಲಿ ಮಾಫಿಯಾದಿಂದ ಭೂ ಮಾಲಿಕತ್ವದ ಕಾನೂನುಬಾಹಿರ ಬದಲಾವಣೆಯ ಬೃಹತ್ ಜಾಲಕ್ಕೆ ಸಂಬಂಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅದು ಈವರೆಗೆ 14 ಜನರನ್ನು ಬಂಧಿಸಿದೆ.