ಜಾರ್ಖಂಡ್: ಚಂಪೈ ಸೊರೇನ್ ಬದಲು ಸಚಿವರಾಗಿ ರಾಮದಾಸ್ ಸೊರೇನ್ ಪ್ರಮಾಣವಚನ
ಸಂತೋಷ್ ಕುಮಾರ್ ಗಂಗ್ವಾರ್, ರಾಮದಾಸ್ ಸೊರೇನ್ | PTI
ರಾಂಚಿ: ಜೆಎಂಎಂ ಶಾಸಕ ರಾಮದೇವ್ ಸೊರೇನ್ ಅವರು ಶುಕ್ರವಾರ ಜಾರ್ಖಂಡ್ನ ಹೇಮಂತ ಸೊರೇನ್ ಸರಕಾರದಲ್ಲಿ ಸಚಿವರಾಗಿ ಪ್ರಮಾಣವಚನವನ್ನು ಸ್ವೀಕರಿಸಿದರು. ಇದರೊಂದಿಗೆ ಸಚಿವ ಮತ್ತು ಶಾಸಕ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್ ಅವರ ರಾಜೀನಾಮೆಯಿಂದಾಗಿ ತೆರವಾಗಿದ್ದ ಸಂಪುಟ ಸ್ಥಾನವನ್ನು ತುಂಬಿದ್ದಾರೆ.
ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಅವರು ಸೊರೇನ್ಗೆ ಪ್ರಮಾಣವಚನವನ್ನು ಬೋಧಿಸಿದರು.
ಕಳೆದ ತಿಂಗಳು ಹೇಮಂತ ಸೊರೇನ್ ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದ ಚಂಪಯಿ ಬುಧವಾರ ಜೆಎಂಎಂ ಪಕ್ಷವನ್ನೂ ತೊರೆದಿದ್ದಾರೆ. ರಾಜ್ಯ ಸರಕಾರದ ಪ್ರಸ್ತುತ ಕಾರ್ಯಶೈಲಿ ಮತ್ತು ನೀತಿಗಳಿಂದಾಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಪಕ್ಷವನ್ನು ತೊರೆಯುವುದು ತನಗೆ ಅನಿವಾರ್ಯವಾಗಿದೆ ಎಂದು ಅವರು ಹೇಳಿದ್ದರು.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಮುನ್ನ ಹೇಮಂತ ಸೊರೇನ್ ರಾಜೀನಾಮೆಯ ಬೆನ್ನಲ್ಲೇ ಫೆ.2ರಂದು ಚಂಪಯಿ ಸೊರೇನ್ ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದರು. ಹೇಮಂತ ಜಾಮೀನಿನಲ್ಲಿ ಬಿಡುಗಡೆಗೊಂಡ ಬಳಿಕ ಜು.3ರಂದು ಅವರು ಮುಖ್ಯಮಂತ್ರಿ ಹುದ್ದೆಯನ್ನು ತೊರೆದಿದ್ದರು. ಜು.4ರಂದು ಹೇಮಂತ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಮತ್ತೆ ಪ್ರಮಾಣ ವಚನ ಸ್ವೀಕರಿಸಿದ್ದರು.