ಜಾರ್ಖಂಡ್| ಪೊಲೀಸ್ ಮಾಹಿತಿದಾರನೆಂಬ ಶಂಕೆ; ಮಾವೋವಾದಿಗಳಿಂದ ಗ್ರಾಮಸ್ಥನ ಹತ್ಯೆ
ಸಾಂದರ್ಭಿಕ ಚಿತ್ರ
ಐಬಾಸಾ: ಪೊಲೀಸ್ ಮಾಹಿತಿದಾರನೆಂದು ಶಂಕಿಸಿ ಜಾರ್ಖಂಡ್ ನ ಪಶ್ಚಿಮ ಸಿಂಗಭೂಮ್ ಜಿಲ್ಲೆಯಲ್ಲಿ ಮಾವೊವಾದಿಗಳ ಗುಂಪೊಂದು 65 ವರ್ಷ ವಯಸ್ಸಿನ ಗ್ರಾಮಸ್ಥನೊಬ್ಬನನ್ನು ಹತ್ಯೆಗೈದಿದ್ದಾರೆಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.
ವ್ಯಕ್ತಿಯ ಮೃತದೇಹವು ಗೊಯಿಲ್ಕೆರಾ ಪೊಲೀಸ್ ಠಾಣೆಯ ವ್ಯಾಪ್ತಿಯ ಗಿಟಿಲಿಪಿ ಗ್ರಾಮದಲ್ಲಿ ಪತ್ತೆಯಾಗಿದೆಯೆಂದು ಮೂಲಗಳು ತಿಳಿಸಿವೆ.
ಮೃತದೇಹದ ಬಳಿಕ ಮಾವೊವಾದಿ ಕರಪತ್ರಗಳು ಪತ್ತೆಯಾಗಿದ್ದು, ಪೊಲೀಸ್ ಮಾಹಿತಿದಾರನಾಗಿರುವ ಹಿನ್ನೆಲೆಯಲ್ಲಿ ಈ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ ಎಂದು ಬರೆಯಲಾಗಿತ್ತೆಂದು ಪೊಲೀಸ್ ಅಧೀಕ್ಷಕ ಅಶುತೋಷ್ ಶೇಖರ್ ತಿಳಿಸಿದ್ದಾರೆ.
ಆದರೆ ಮೃತನ ಪೊಲೀಸರ ಜೊತೆಗೆ ಯಾವುದೇ ರೀತಿಯ ನಂಟನ್ನು ಹೊಂದಿಲ್ಲವೆಂದು ಮೂಲಗಳು ತಿಳಿಸಿವೆ. ಮಾವೊವಾದಿಗಳು ಶನಿವಾರ ರಾತ್ರಿ ವ್ಯಕ್ತಿಯ ಗಂಟಲನ್ನು ಸೀಳಿದ್ದು, ಮೃತದೇಹವನ್ನು ಎಸೆದಿದ್ದಾರೆಂದು ವರದಿಗಳು ತಿಳಿಸಿವೆ.
ಈ ಹತ್ಯೆಯಲ್ಲಿ ಶಾಮೀಲಾದ ವ್ಯಕ್ತಿಗಳನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಎಸ್ಪಿ ತಿಳಿಸಿದ್ದಾರೆ.