ಜಾರ್ಖಂಡ್ | ಧನ್ ಬಾದ್ ಠಾಣೆಯಲ್ಲಿ ಇರಿಸಲಾಗಿದ್ದ ಭಂಗಿ, ಗಾಂಜಾವನ್ನು ಇಲಿಗಳು ನಾಶಗೊಳಿಸಿವೆ ಎಂದ ಪೊಲೀಸರು!
Representational Image | PC: Canva
ಧನ್ ಬಾದ್ (ಜಾರ್ಖಂಡ್): ಕಳ್ಳಸಾಗಣೆದಾರರಿಂದ ವಶಪಡಿಸಿಕೊಂಡು, ಜಾರ್ಖಂಡ್ ನ ಧನ್ ಬಾದ್ ಜಿಲ್ಲೆಯ ಠಾಣೆಯಲ್ಲಿರಿಸಲಾಗಿದ್ದ 10 ಕೆಜಿ ಭಂಗಿ ಹಾಗೂ 9 ಕೆಜಿ ಗಾಂಜಾವನ್ನು ಇಲಿಗಳು ನಾಶಗೊಳಿಸಿವೆ ಎಂದು ಪೊಲೀಸರು ದೂರಿರುವ ಘಟನೆ ವರದಿಯಾಗಿದೆ.
ಈ ಮಾಹಿತಿಯನ್ನು ಪೊಲೀಸರು ಜಿಲ್ಲೆಯಲ್ಲಿನ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ ಎಂದು ಈ ಪ್ರಕರಣದ ವಿಚಾರಣೆಯಲ್ಲಿ ಭಾಗಿಯಾಗಿರುವ ವಕೀಲರೊಬ್ಬರು ರವಿವಾರ ತಿಳಿಸಿದ್ದಾರೆ.
ಆರು ವರ್ಷಗಳ ಹಿಂದೆ ವಶಪಡಿಸಿಕೊಂಡಿದ್ದ ಭಂಗಿ ಹಾಗೂ ಗಾಂಜಾವನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ರಾಜ್ ಗಂಜ್ ಪೊಲೀಸ್ ಠಾಣೆಯ ಠಾಣಾಧಿಕಾರಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರಾಮ್ ಶರ್ಮ ಸೂಚಿಸಿದ ನಂತರ ಶನಿವಾರ ಪೊಲೀಸರು ಈ ವರದಿಯನ್ನು ಸಲ್ಲಿಸಿದ್ದಾರೆ.
ಪೊಲೀಸ್ ಠಾಣೆಯ ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿದ್ದ ಮಾದಕ ದ್ರವ್ಯಗಳನ್ನು ಇಲಿಗಳು ಸಂಪೂರ್ಣವಾಗಿ ನಾಶಗೊಳಿಸಿವೆ ಎಂದು ಪೊಲೀಸ್ ಅಧಿಕಾರಿಯು ತಮ್ಮ ವರದಿಯಲ್ಲಿ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ವರದಿಯೊಂದನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಡಿಸೆಂಬರ್ 14, 2018ರಂದು ಶಂಭು ಪ್ರಸಾದ್ ಹಾಗೂ ಆತನ ಪುತ್ರನನ್ನು ಬಂಧಿಸಿದ್ದ ರಾಜ್ ಗಂಜ್ ಪೊಲೀಸರು, ಅವರಿಂದ 10 ಕೆಜಿ ಭಂಗಿ ಹಾಗೂ 9 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದರು. ಅವರ ವಿರುದ್ಧ ಪ್ರಾಥಮಿಕ ಮಾಹಿತಿ ವರದಿಯನ್ನೂ ದಾಖಲಿಸಿಕೊಳ್ಳಲಾಗಿತ್ತು.
ವಿಚಾರಣೆಯ ಸಂದರ್ಭದಲ್ಲಿ ಪ್ರಕರಣದ ತನಿಖಾಧಿಕಾರಿಗೆಯಾದ ಜಯಪ್ರಕಾಶ್ ಪ್ರಸಾದ್ ಅವರಿಗೆ ವಶಪಡಿಸಿಕೊಂಡಿರುವ ಭಂಗಿ ಮತ್ತು ಗಾಂಜಾವನ್ನು ಎಪ್ರಿಲ್ 6ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ನ್ಯಾಯಾಲಯವು ಆದೇಶಿಸಿತ್ತು.
“ವಶಪಡಿಸಿಕೊಳ್ಳಲಾಗಿರುವ ಸಾಮಗ್ರಿಗಳೆಲ್ಲವನ್ನೂ ಇಲಿಗಳು ನಾಶಗೊಳಿಸಿವೆ ಎಂಬ ರಾಜ್ ಗಂಜ್ ಪೊಲೀಸ್ ಠಾಣೆಯ ಠಾಣಾಧಿಕಾರಿಯ ಅರ್ಜಿಯೊಂದಿಗೆ ಶನಿವಾರ ತನಿಖಾಧಿಕಾರಿ ಪ್ರಸಾದ್ ನ್ಯಾಯಾಲಯದ ಮುಂದೆ ಹಾಜರಾದರು” ಎಂದು ಈ ಪ್ರಕರಣದಲ್ಲಿ ಪ್ರತಿವಾದಿಗಳ ಪರ ವಕೀಲರಾಗಿರುವ ಅಭಯ್ ಭಟ್ ತಿಳಿಸಿದ್ದಾರೆ.
ವಶಪಡಿಸಿಕೊಳ್ಳಲಾದ ಸಾಮಗ್ರಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಲ್ಲಿ ಪೊಲೀಸರು ವಿಫಲವಾಗಿರುವುದರಿಂದ, ಪೊಲೀಸರು ನನ್ನ ಕಕ್ಷಿದಾರರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿರುವಂತಿದೆ ಕಾಣುತ್ತಿದೆ ಎಂದು ಅಭಯ್ ಭಟ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.